ನವದೆಹಲಿ,ಫೆ 13 (DaijiworldNews/AK): ಬೇಹುಗಾರಿಕೆ ಆರೋಪದಡಿಯಲ್ಲಿ ಕತಾರ್ ನಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿದ್ದ 'ಭಾರತದ ಮಾಜಿ ನಾವಿಕರ ರಕ್ಷಣೆಗೆ ಪ್ರಧಾನಿ ಮೋದಿ ಅಲ್ಲ, ಶಾರುಖ್ ಖಾನ್ ಕಾರಣ' ಎಂದು ಹೇಳುವ ಮೂಲಕ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ ಪ್ರಧಾನಿ ಮೋದಿ ಅವರ ಕಾಲೆಳೆದಿದ್ದಾರೆ.
ಬೇಹಗಾರಿಕೆಯ ಆರೋಪದ ಹಿನ್ನೆಲೆಯಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಭಾರತೀಯ ನೌಕಾ ಪಡೆಯ ಮಾಜಿ ಯೋಧರನ್ನು ಭಾರತಕ್ಕೆ ವಾಪಸ್ ಕರೆ ತರುವಲ್ಲಿ ಕೇಂದ್ರ ಸರ್ಕಾರ ಯಶಸ್ವಿಯಾಗಿದೆ.
ಇದೆಲ್ಲ ಪ್ರಧಾನಿ ಮೋದಿ ಅವರು ವರ್ಚಸ್ಸಿನಿಂದಾಗಿಯೇ ಮಾಜಿ ಯೋಧರನ್ನು ರಕ್ಷಿಸಲು ಸಾಧ್ಯವಾಯಿತು ಎನ್ನಲಾಗುತ್ತಿದೆ. ಆದರೆ, ಬಿಜೆಪಿಯ ಹಿರಿಯ ನಾಯಕ ನರೇಂದ್ರ ಮೋದಿ ಅವರನ್ನು ಟೀಕಿಸುವ ಸುಬ್ರಮಣಿಯನ್ ಸ್ವಾಮಿ ಮಾತ್ರ ಈ ವಿಚಾರದಲ್ಲೂ ಮೋದಿ ಅವರ ಕಾಲೆಳೆದಿದ್ದಾರೆ.
ನಟ ಶಾರುಕ್ ಖಾನ್ ಅವರ ಮಧ್ಯಸ್ಥಿಕೆಯಿಂದಾಗಿ ಮಾಜಿ ಯೋಧರ ಬಿಡುಗಡೆಯಾಗಿದೆ ಎಂದು ಹೇಳಿದ್ದಾರೆ.ಯುಎಇ ಮತ್ತು ಕತಾರ್ ಭೇಟಿಯ ಕುರಿತು ಪ್ರಧಾನಿ ಮೋದಿ ಅವರು ಟ್ವೀಟ್ ಮಾಡಿದ್ದರು. 'ಮುಂದಿನ ಎರಡು ದಿನಗಳಲ್ಲಿ, ನಾನು ವಿವಿಧ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲು ಯುಎಇ ಮತ್ತು ಕತಾರ್ಗೆ ಭೇಟಿ ನೀಡಲಿದ್ದೇನೆ, ಇದು ಈ ರಾಷ್ಟ್ರಗಳೊಂದಿಗೆ ಭಾರತದ ದ್ವಿಪಕ್ಷೀಯ ಸಂಬಂಧಗಳನ್ನು ಗಾಢಗೊಳಿಸುತ್ತದೆ ಎಂದು ಹೇಳಿದ್ದರು.
ಈ ಟ್ವೀಟ್ಗೆ ಪ್ರತಿಕ್ರಿಯಿಸಿದ ಬಿಜೆಪಿ ನಾಯಕ ಸುಬ್ರಮಣಿಯನ್ ಸ್ವಾಮಿ, ಕತಾರ್ನ ಶೇಖ್ಗಳನ್ನು ಮನವೊಲಿಸಲು ವಿದೇಶಾಂಗ ಸಚಿವಾಲಯ ಮತ್ತು ರಾಷ್ಟ್ರೀಯ ಭದ್ರತಾ ಸಲಹೆಗಾರರು ವಿಫಲವಾದ ಬಳಿಕ ಮೋದಿ ಅವರು ಸಿನಿಮಾ ತಾರೆ ಶಾರುಕ್ ಖಾನ್ ಅವರಿಗೆ ಮಧ್ಯ ಪ್ರವೇಶಿಸುವಂತೆ ಮನವಿ ಮಾಡಿಕೊಂಡರು.
ಇದರಿಂದ ನಮ್ಮ ನೌಕಾ ಅಧಿಕಾರಿಗಳನ್ನು ಬಿಡುಗಡೆ ಮಾಡಲು ಕತಾರ್ ಶೇಖ್ಗಳೊಂದಿಗೆ ದುಬಾರಿ ಒಪ್ಪಂದವನ್ನು ಕುದುರಿಸಿಕೊಂಡರು ಎಂದು ಟೀಕಿಸಿದ್ದಾರೆ.