ದೆಹಲಿ, ಫೆ 13 (DaijiworldNews/AA): ಲೋಕಸಭೆ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಅಧಿಕಾರಕ್ಕೆ ಬಂದರೆ ವಿವಿಧ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆಯನ್ನು (ಎಂಎಸ್ ಪಿ) ಖಾತ್ರಿಪಡಿಸುವ ಕಾನೂನನ್ನು ಜಾರಿಗೊಳಿಸಲಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಘೋಷಿಸಿದ್ದಾರೆ.
ಈ ಬಗ್ಗೆ ಮಾತನಾಡಿದ ಖರ್ಗೆ ಅವರು, ದೇಶಾದ್ಯಂತ ಕನಿಷ್ಠ ಬೆಂಬಲ ಬೆಲೆ ರೈತರ ಬಹುಕಾಲದ ಬೇಡಿಕೆಯಾಗಿದೆ. ವಿವಿಧ ಕೃಷಿ ಉತ್ಪನ್ನಗಳಿಗೆ ಎಂಎಸ್ ಪಿಯನ್ನು ರಕ್ಷಿಸುವ ಕಾನೂನನ್ನು ಇಂಡಿಯಾ ಬಣ ಅಧಿಕಾರಕ್ಕೆ ಬಂದರೆ ಜಾರಿಗೆ ತರುತ್ತದೆ. ಇದು ಕಾಂಗ್ರೆಸ್ ನಾಯಕತ್ವದ ನಿರ್ಣಾಯಕ ಭರವಸೆಯಾಗಿದೆ. ದೇಶದ ಆರ್ಥಿಕತೆಯಲ್ಲಿ ರೈತರು ಮಹತ್ವದ ಪಾತ್ರವನ್ನು ವಹಿಸುತ್ತಾರೆ. ರೈತರ ಕಾಳಜಿ ಹಾಗೂ ಕಲ್ಯಾಣವನ್ನು ಪರಿಹಾರ ಮಾಡಲು ಪಕ್ಷ ಬದ್ಧವಾಗಿದೆ ಎಂದು ತಿಳಿಸಿದರು.
ಇನ್ನು ಈ ಕುರಿತು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿದ ಅವರು, ರಾಹುಲ್ ಗಾಂಧಿ ಅವರು ಇಂದು ರೈತ ಸಹೋದರರಿಗೆ ಐತಿಹಾಸಿಕ ದಿನವಾಗಿದೆ. ಸ್ವಾಮಿನಾಥನ್ ಆಯೋಗದ ಅನುಸಾರ ಬೆಳೆಗಳ ಮೇಲೆ ಪ್ರತಿ ರೈತರಿಗೆ ಎಂಎಸ್ ಪಿ ಕಾನೂನುಬದ್ಧ ಖಾತರಿ ನೀಡಲು ನಮ್ಮ ಸರ್ಕಾರ ನಿರ್ಧಾರ ಮಾಡಿದೆ. ಈ ಕಾನೂನು ಜಾರಿ ಮಾಡುವುದರಿಂದ 15 ಕೋಟಿ ರೈತ ಕುಟುಂಬಗಳ ಏಳಿಗೆಯನ್ನು ಕಾಣಬಹುದಾಗಿದ್ದು, ಇದು ಅವರ ಜೀವನವನ್ನು ಬದಲಾಯಿಸುತ್ತದೆ. ನ್ಯಾಯ ಹಾದಿಯಲ್ಲಿ ಕಾಂಗ್ರೆಸ್ ನ ಮೊದಲ ಖಾತರಿ ಇದಾಗಿದೆ ಎಂದರು.