ಕೋಲಾರ, ಫೆ 12 (DaijiworldNews/SK): ಕೇಂದ್ರ ಸರ್ಕಾರದಿಂದ ರಾಜ್ಯಕ್ಕೆ ತೆರಿಗೆ ವಂಚನೆ ಮಾಡಿದೆ ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆರೋಪಕ್ಕೆ ತೀರುಗೇಟು ನೀಡಿದ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತಿನ್ನಲು ನಾನು, ಯುದ್ಧಕ್ಕೆ ನೀವು ಹೋಗಿ ಅಂತಾ ಸಿದ್ದರಾಮಯ್ಯ ಹೇಳುತ್ತಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪ್ರಲ್ಹಾದ್ ಜೋಶಿ ಅವರು, ರಾಜ್ಯಕ್ಕೆ ಯುಪಿಎ ಸರ್ಕಾರದಲ್ಲಿ 60 ಸಾವಿರ ಕೋಟಿ ರೂ. ಕೊಟ್ಟಿದ್ದಾರೆ ಅಷ್ಟೇ. ರಾಜ್ಯಕ್ಕೆ 1 ಲಕ್ಷ 50 ಸಾವಿರ ಕೋಟಿ ಆದರೂ ಯುಪಿಎ ಷರ್ಕಾರ ಕೊಡಬೇಕಿತ್ತು, ಯಾಕೆ ಕೊಟ್ಟಿಲ್ಲ ಎಂದು ಪ್ರಶ್ನಿಸಿದ್ದಾರೆ.
ಇನ್ನು ನಮ್ಮ ಅವಧಿಯಲ್ಲಿ ರಾಜ್ಯಕ್ಕೆ 2.61 ಲಕ್ಷ ಕೋಟಿ ರೂ. ಕೊಟ್ಟಿದ್ದೇವೆ. ಆ ಮೂಲಕ ನಮ್ಮ ಸರ್ಕಾರ ಕಾಂಗ್ರೆಸ್ ನೀಡಿದ್ದಕ್ಕಿಂತ 256 ಪರ್ಸೆಂಟ್ ಹೆಚ್ಚು ಅನುದಾನ ಕೊಟ್ಟಿದೆ. ಇಷ್ಟು ಮಾತ್ರವಲ್ಲದೇ ಪ್ರಧಾನಿ ನರೇಂದ್ರ ಮೋದಿ ಕಾಲದಲ್ಲಿ ಬಜೆಟ್ ಗಾತ್ರವೂ ಹೆಚ್ಚಿದೆ ಎಂದಿದ್ದಾರೆ.