ಬೆಂಗಳೂರು, ಫೆ 12 (DaijiworldNews/HR): ರಾಜ್ಯದಲ್ಲಿ ಬರ ಪರಿಸ್ಥಿತಿಯಿಂದ ಸಂಕಷ್ಟದಲ್ಲಿರುವ ರೈತರ ನೆರವಿಗೆ ಧಾವಿಸಿರುವ ನಮ್ಮ ಸರಕಾರ ಮೊದಲ ಕಂತಿನಲ್ಲಿ ತಲಾ 2ಸಾವಿರ ರೂ.ಪರಿಹಾರ ಕೊಡುತ್ತಿದೆ. ಇಲ್ಲಿಯವರೆಗೂ 33 ಲಕ್ಷ ರೈತರಿಗೆ 628ಕೋಟಿ ರೂ.ಪರಿಹಾರ ನೀಡಿದ್ದೇವೆ. ಇದು ನಮ್ಮ ಸರಕಾರಕ್ಕೆ ರೈತರ ಮೇಲಿರುವ ಕಾಳಜಿ ಮತ್ತು ಬದ್ಧತೆ. ಬರ ಪರಿಹಾರದಲ್ಲಿ ಕೇಂದ್ರದ ಕೊಡುಗೆ ಏನು ಎಂದು ಹೇಳುವ ತಾಕತ್ತು ರಾಜ್ಯ ಬಿಜೆಪಿ ನಾಯಕರಿಗಿದೆಯೇ?’ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಪ್ರಶ್ನಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಸರಣಿ ಪೋಸ್ಟ್ ಹಾಕಿರುವ ಅವರು, ‘ಹವಾಮಾನ ಇಲಾಖೆಯ ದತ್ತಾಂಶಗಳ ಪ್ರಕಾರ ಈ ಬಾರಿ ರಾಜ್ಯಕ್ಕೆ ತಲೆದೋರಿರುವ ಬರ 122 ವರ್ಷಗಳಲ್ಲೇ ಭೀಕರ ಬರ ಎಂದಿದೆ. ರಾಜ್ಯದ 223 ತಾಲೂಕುಗಳು ಈ ಬಾರಿ ತೀವ್ರ ಬರದಿಂದ ನರಳುತ್ತಿವೆ. ಸಾವಿರಾರು ಕೋಟಿ ಬೆಳೆ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
‘ಎನ್ಡಿಆರ್ಎಫ್ ಅಡಿ ಬರ ಪರಿಹಾರ ನೀಡುವ ಉನ್ನತಾಧಿಕಾರ ಸಮಿತಿಗೆ ಕೇಂದ್ರ ಗೃಹ ಸಚಿವರೆ ಅಧ್ಯಕ್ಷರು. ಅಮಿತ್ ಶಾ ನಿನ್ನೆಯಷ್ಟೇ ಮೈಸೂರಿಗೆ ಬಂದಿದ್ದರು. ಈ ವೇಳೆ ಅವರ ಬಾಯಿಂದ ರಾಜ್ಯಕ್ಕೆ ಬರ ಪರಿಹಾರ ನೀಡುವ ಬಗ್ಗೆ ಒಂದಾದರೂ ಮಾತು ಬಂತೆ.? ಶಾ ಎದುರು ಜೀ ಹುಜೂರ್ ಎಂದು ನಡು ಬಗ್ಗಿಸಿ ನಿಂತಿದ್ದ ರಾಜ್ಯ ಬಿಜೆಪಿ ನಾಯಕರಲ್ಲಿ ಒಬ್ಬರಾದರೂ ಬರ ಪರಿಹಾರ ನೀಡುವಂತೆ ಶಾ ಅವರ ಬಳಿ ಕೇಳಿಕೊಂಡರೆ.? ನಮ್ಮ ಎದುರು ಕಡಿ, ಕೊಚ್ಚು, ಗುಂಡಿಟ್ಟು ಕೊಲ್ಲು ಎಂದು ಪ್ರತಾಪ ತೋರಿಸುವ ರಾಜ್ಯ ಬಿಜೆಪಿ ನಾಯಕರು ಈ ಪೌರುಷವನ್ನು ರಾಜ್ಯದ ರೈತರ ಹಿತಕ್ಕಾಗಿ ಅಮಿತ್ ಶಾ ಎದುರು ತೋರಿಸಬೇಕಿತ್ತಲ್ಲವೆ?’ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಮೈಸೂರಿಗೆ ಬಂದಿದ್ದ ಅಮಿತ್ ಶಾ ನಮ್ಮ ಗ್ಯಾರಂಟಿ ಯೋಜನೆಗಳ ಬಗ್ಗೆ ತಮ್ಮ ಹೊಟ್ಟೆಯೊಳಗಿದ್ದ ವಿಷವನ್ನು ಕಕ್ಕಿದ್ದಾರೆ. ಬಡವರಿಗೆ ಆರ್ಥಿಕ ಸ್ವಾತಂತ್ರ್ಯ ಹಾಗೂ ಎರಡೊತ್ತಿನ ಅನ್ನ ನೀಡುವ ಗ್ಯಾರಂಟಿ ಯೋಜನೆಗಳ ಬಗ್ಗೆ ಬಿಜೆಪಿಯವರಿಗೆ ಯಾವ ಮನಃಸ್ಥಿತಿಯಿದೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತದೆ. ಬಡವರಿಗೆ ಅನ್ನ ಕೊಡುವುದಕ್ಕೇ ಇಷ್ಟು ವಿಷ ಕಾರುವವರು, ಬರದಿಂದ ತತ್ತರಿಸುವ ರೈತರ ನೆರವಿಗೆ ಧಾವಿಸಲು ಸಾಧ್ಯವೇ.? ಕೇಂದ್ರದ ಬರ ಪರಿಹಾರ ಎನ್ನುವುದು ಕನ್ನಡಿಗರ ಪಾಲಿಗೆ ಮಾಯಾಜಿಂಕೆಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ’ ಎಂದು ವಾಗ್ದಾಳಿ ನಡೆಸಿದ್ದಾರೆ.