ಮಂಡ್ಯ, ಫೆ 12 (DaijiworldNews/SK): ಎಷ್ಟೇ ಒತ್ತಡ ಬಂದರೂ ನಾನು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮುಂಬರುವ ಲೋಕಸಭಾ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ನೀಡುವ ಮೂಲಕ ಈ ಬಾರಿ ನಿಖಿಲ್, ಮಂಡ್ಯ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎನ್ನುವ ಊಹಪೋಹಾಗಳಿಗೆ ತೆರೆ ಬಿದ್ದಿದೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ನಿಖಿಲ್ ಕುಮಾರಸ್ವಾಮಿ ಅವರು, ಲೋಕಸಭಾ ಚುನಾವಣೆಯಲ್ಲಿ ನಾನು ಹಾಗೂ ಕುಮಾರಸ್ವಾಮಿ ಅವರು ಸ್ಪರ್ಧೆ ಮಾಡಬೇಕೆಂದು ಕಾರ್ಯಕರ್ತರು ಹಾಗೂ ಮುಖಂಡರ ಒತ್ತಡ ಹೇರಿದ್ದಾರೆ. ಆದರೆ ನನ್ನ ಮಾತು ಎಲ್ಲಾ ಸಮಯದಲ್ಲೂ ಒಂದೇ, ನಾನು ಮಂಡ್ಯ ಕ್ಷೇತ್ರದ ಆಕಾಂಕ್ಷಿಯಲ್ಲ. ಈ ಬಾರಿ ಮಂಡ್ಯ ಕ್ಷೇತ್ರದಿಂದ ನಾನು ಸ್ಪರ್ಧಿಸಲ್ಲ. ಯಾವುದೇ ಒತ್ತಡ ಬಂದರೂ ನಾನು ಲೋಕಸಭಾ ಚುನಾವಣೆಗೆ ನಿಲ್ಲಲ್ಲ ಎಂದು ತಿಳಿಸಿದ್ದಾರೆ.
ಇನ್ನು ಎನ್ಡಿಎ ಮೈತ್ರಿಕೂಟದಲ್ಲಿ ಯಾವ ರೀತಿ ಚುನಾವಣೆ ಎದುರಿಸುವ ಬೇಕು ಎಂಬ ಬಗ್ಗೆ ಚರ್ಚೆ ಆಗಿದೆ. ನನ್ನ ಪ್ರವಾಸ ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಮಾತ್ರ ಸೀಮಿತವಾಗಿಲ್ಲ. ಕೋಲಾರ, ಹಾಸನ, ಮೈಸೂರು ಸೇರಿದಂತೆ ಎಲ್ಲಾ ಕಡೆ ಪ್ರವಾಸ ಕೈಗೊಳ್ಳುತ್ತೇನೆ. ನಾನು ಈ ಹಿಂದೆ ಮಂಡ್ಯ ಅಭ್ಯರ್ಥಿ ಆಗಿದ್ದ ಕಾರಣ ಮಂಡ್ಯದಲ್ಲಿ ಹೆಚ್ಚೆಚ್ಚು ಓಡಾಡಲು ಕೇಳಿದ್ದಾರೆ. ಮುಂದಿನ ದಿನಗಳಲ್ಲಿ ಜಿಲ್ಲೆಯ ಕ್ಷೇತ್ರಗಳಿಗೂ ಭೇಟಿ ನೀಡುತ್ತೇನೆ ಎಂದು ಹೇಳಿದ್ದಾರೆ.