ಮಧ್ಯಪ್ರದೇಶ, ಫೆ 11 (DaijiworldNews/PC): ಮುಂದಿನ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಏಕಾಂಗಿಯಾಗಿ 370 ಸ್ಥಾನಗಳ ಗಡಿ ಮುಟ್ಟಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಧ್ಯಪ್ರದೇಶದಲ್ಲಿ 7,550 ಕೋಟಿ ರೂ.ಗಳ ಅಭಿವೃದ್ಧಿ ಯೋಜನೆಗಳ ಶಂಕುಸ್ಥಾಪನೆ ನೆರವೇರಿಸಿದ ಬಳಿಕ ಮಾತನಾಡಿದ ಅವರು, ನಮ್ಮ ಪಕ್ಷಕ್ಕೆ ಬುಡಕಟ್ಟು ಸಮುದಾಯ ಮತಬ್ಯಾಂಕ್ ಅಲ್ಲ, ಅದು ದೇಶದ ಹೆಮ್ಮೆ. ನಮ್ಮ ಭಾರತೀಯ ಜನತಾ ಪಾರ್ಟಿ ಪಕ್ಷವು ಮುಂಬರುವ ಚುನಾವಣೆಯಲ್ಲಿ 370 ಸ್ಥಾನಗಳ ಗಡಿಯನ್ನು ಮುಟ್ಟಲಿದೆ ಎಂದು ಹೇಳಿದರು.
ನಾವು ಚುನಾವಣಾ ಪ್ರಚಾರಕ್ಕಾಗಿ ಮಧ್ಯಪ್ರದೇಶಕ್ಕೆಬಂದಿಲ್ಲ ಬದಲಿಗೆ ಜನರ ಸೇವೆಗಾಗಿ ಬಂದಿದ್ದೇನೆ. ಕೆಲವರು ಮೋದಿ ಲೋಕಸಭೆ ಚುನಾವಣೆಯ ಹೋರಾಟವನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಆದರೆ ನಾನು ಜನರ ಸೇವೆ ಮಾಡಲು ಬಂದಿದ್ದೇನೆ ಎಂದರು.
ಮಧ್ಯಪ್ರದೇಶದಲ್ಲಿ 6 ಲೋಕಸಭಾ ಸ್ಥಾನಗಳನ್ನು ಬುಡಕಟ್ಟು ಜನಾಂಗದವರಿಗೆ ಮೀಸಲಿರಿಸಲಾಗಿದೆ. ಮಧ್ಯಪ್ರದೇಶಕ್ಕೆ ಭೇಟಿ ನೀಡಿದ ಸಂದರ್ಭ ಪ್ರಧಾನಿ ಮೋದಿಯವರು ಆಹಾರ ಅನುದಾನ ಯೋಜನೆಯ ಸುಮಾರು ಎರಡು ಲಕ್ಷ ಮಹಿಳಾ ಫಲಾನುಭವಿಗಳಿಗೆ ಮಾಸಿಕ ಕಂತುಗಳನ್ನು ವಿತರಿಸಿದರು.