ನವದೆಹಲಿ, ಫೆ 10(DaijiworldNews/AK): ಈ 5 ವರ್ಷಗಳು ದೇಶಕ್ಕೆ ನಮ್ಮ ಸೇವೆಯಾಗಿದೆ. ಕಳೆದ 5 ವರ್ಷದಲ್ಲಿ ದೇಶದ ಸುಧಾರಣೆ, ಕಾರ್ಯಕ್ಷಮತೆ ಹಾಗೂ ಪರಿವರ್ತನೆಗಾಗಿ ನಾವು ಶ್ರಮಿಸಿದ್ದೇವೆ.17 ನೇ ಲೋಕಸಭೆಯ ಐದು ವರ್ಷಗಳಲ್ಲಿ ದೇಶಕ್ಕಾಗಿ ಹಲವಾರು ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.
ಅವರು ಇಂದು 17 ನೇ ಲೋಕಸಭೆಯ ಕಲಾಪಗಳ ಮುಕ್ತಾಯದ ಅಧಿವೇಶನದಲ್ಲಿ ಮಾತನಾಡಿ, ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಧನ್ಯವಾದ ಅರ್ಪಿಸಿದರು. ಅಲ್ಲದೆ ನೀವು ಯಾವಾಗಲೂ ನಗುಮುಖದಿಂದಿರುತ್ತೀರಿ. ನೀವು ತಾಳ್ಮೆ ಮತ್ತು ಸ್ವಾತಂತ್ರ್ಯದಿಂದ ಪ್ರತಿಯೊಂದು ಪರಿಸ್ಥಿತಿಯನ್ನು ನಿಭಾಯಿಸಿದ್ದೀರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ವೇಳೆ ಸಭಾನಾಯಕನಾಗಿ ಮತ್ತು ಸಹೋದ್ಯೋಗಿಯಾಗಿ ನಾನು ನಿಮಗೆಲ್ಲರಿಗೂ ಧನ್ಯವಾದ ಹೇಳುತ್ತೇನೆ ಎಂದರು.ಕಳೆದ ಐದು ವರ್ಷಗಳಲ್ಲಿ, ಮಾನವೀಯತೆಯು ಶತಮಾನದ ದೊಡ್ಡ ಸವಾಲನ್ನು ಎದುರಿಸಿದೆ. ಸದನಕ್ಕೆ ಬರುವುದೂ ಸವಾಲಿನ ಪರಿಸ್ಥಿತಿಯಾಗಿದೆ. ಸ್ಪೀಕರ್ ಸರ್, ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದು ನೀವು ಖಚಿತಪಡಿಸಿದ್ದೀರಿ.ದೇಶದ ಕೆಲಸ ಎಂದಿಗೂ ನಿಲ್ಲುವುದಿಲ್ಲ ಎಂದು ಹೇಳಿದರು.
ಕೋವಿಡ್ ಸಾಂಕ್ರಾಮಿಕ ಸಮಯದಲ್ಲಿ ಬೇರೇನೂ ಯೋಚಿಸದೆ ಸಂಸದರು ತಮ್ಮ ಭತ್ಯೆಯನ್ನು ಬಿಟ್ಟುಕೊಟ್ಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು. ಸಂಸದರು ಶೇಕಡಾ 30 ರಷ್ಟು ಸಂಬಳ ಕಡಿತವನ್ನು ಮಾಡಿಕೊಳ್ಳಲು ನಿರ್ಧರಿಸಿದರು. ಸಂಸತ್ತಿನ ಕ್ಯಾಂಟೀನ್ನಲ್ಲಿ ಎಲ್ಲರೂ ಹೊರಗಿನಂತೆಯೇ ಪಾವತಿಸಲು ಸಂಸದರು ನಿರ್ಧರಿಸಿದ್ದಾರೆ. ನಮ್ಮನ್ನು ಅಪಹಾಸ್ಯ ಮಾಡುವವರ ಬಾಯ್ಮುಚ್ಚಿಸಿದ್ದೀರಿ ಎಂದರು.
17ನೇ ಲೋಕಸಭೆಯ ಕೆಲಸವನ್ನು ಶ್ಲಾಘಿಸಿದ ಮೋದಿ, ಅದರ ಮೊದಲ ಅಧಿವೇಶನದಲ್ಲಿ ಸಂಸತ್ತಿನ ಉಭಯ ಸದನಗಳಲ್ಲಿ 30 ಮಸೂದೆಗಳನ್ನು ಅಂಗೀಕರಿಸಲಾಯಿತು. ಇದು ಒಂದು ದಾಖಲೆಯಾಗಿದೆ ಎಂದರು. 17ನೇ ಲೋಕಸಭೆಯು ಶೇಕಡಾ 97 ರಷ್ಟು ಉತ್ಪಾದಕತೆಯನ್ನು ಹೊಂದಿತ್ತು. ಏಳು ಅಧಿವೇಶನಗಳಲ್ಲಿ ಇದು ಶೇಕಡಾ 100 ಕ್ಕಿಂತ ಹೆಚ್ಚಿತ್ತು ಎಂದು ಹೇಳಿದರು.ನಾವು ಭಯೋತ್ಪಾದನೆಯ ವಿರುದ್ಧ ಕಠಿಣ ಕಾನೂನುಗಳನ್ನು ಮಾಡಿದ್ದೇವೆ. ಇದು ಸಂತ್ರಸ್ತರಿಗೆ ಸಾಂತ್ವನ ನೀಡುತ್ತದೆ ಮತ್ತು ಅವರಿಗೆ ಆತ್ಮವಿಶ್ವಾಸವನ್ನು ನೀಡುತ್ತದೆ ಎಂದರು.
ಇದು ಭಾರತವನ್ನು ಭಯೋತ್ಪಾದನೆಯಿಂದ ಮುಕ್ತಗೊಳಿಸುತ್ತದೆ . ಆರ್ಟಿಕಲ್ 370 ರದ್ದತಿಯನ್ನು ಉಲ್ಲೇಖಿಸಿದ ಅವರು, ಜಮ್ಮು ಮತ್ತು ಕಾಶ್ಮೀರದ ಜನರಿಗೆ ಈಗ ನ್ಯಾಯ ಸಿಗುತ್ತದೆ ಪ್ರಧಾನಿ ನರೇಂದ್ರ ಮೋದಿ ಹೇಳಿದರು