ಲಖನೌ,ಫೆ 10(DaijiworldNews/ AK): ಸರ್ಕಾರಿ ಹಣ ದುರುಪಯೋಗ ಆರೋಪ ಎದುರಿಸುತ್ತಿರುವ ಕಾಂಗ್ರೆಸ್ ನಾಯಕ ಸಲ್ಮಾನ್ ಖುರ್ಷಿದ್ ಅವರ ಪತ್ನಿ ಲೂಯಿಸ್ ಖುರ್ಷಿದ್ ಅವರಿಗೆ ಅಕ್ರಮ ಹಣ ವರ್ಗಾವಣೆ ತನಿಖೆಯ ಭಾಗವಾಗಿ ಜಾರಿ ನಿರ್ದೇಶನಾಲಯ ನೋಟಿಸ್ ಜಾರಿ ಮಾಡಿದೆ. ಫೆಬ್ರವರಿ 15 ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ಎರಡು ದಿನಗಳ ಹಿಂದೆ, ಉತ್ತರ ಪ್ರದೇಶದ ಬರೇಲಿಯಲ್ಲಿರುವ ಸಂಸದ-ಶಾಸಕರ ನ್ಯಾಯಾಲಯ, ಇದೇ ಪ್ರಕರಣ ಸಂಬಂಧ ಲೂಯಿಸ್ ಖುರ್ಷಿದ್ ಮತ್ತು ಇನ್ನೊಬ್ಬ ಆರೋಪಿ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು ಮತ್ತು ಫೆಬ್ರವರಿ 16 ರಂದು ಮುಂದಿನ ವಿಚಾರಣೆ ನಿಗದಿಪಡಿಸಿದೆ.ಸಲ್ಮಾನ್ ಖುರ್ಷಿದ್ ಅವರು ಯುಪಿಎ ಸರ್ಕಾರದಲ್ಲಿ ಕೇಂದ್ರ ಸಚಿವರಾಗಿಯೂ ಸೇವೆ ಸಲ್ಲಿಸಿದ್ದಾರೆ.
2009-10ರಲ್ಲಿ, ಖುರ್ಷಿದ್ ಮತ್ತು ಅವರ ಪತ್ನಿ ಲೂಯಿಸ್ ಖುರ್ಷಿದ್ ಅಧ್ಯಕ್ಷರಾಗಿರುವ ಟ್ರಸ್ಟ್ ಒಂದರ ಕೃತಕ ಕೈ-ಕಾಲುಗಳು ಮತ್ತು ಇತರ ಸಲಕರಣೆಗಳ ವಿತರಣೆ ಯೋಜನೆಯಲ್ಲಿ ಅವ್ಯವಹಾರ ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದ ಪ್ರಕರಣವಾಗಿದೆ.