ದೆಹಲಿ, ಫೆ 10(DaijiworldNews/AA): ಮುಂಬರುವ ಲೋಕಸಭೆ ಚುನಾವಣೆಗೆ ಮುನ್ನ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಜಾರಿಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.
ಸಿಎಎ ದೇಶದ ಕಾಯ್ದೆಯಾಗಿದ್ದು, ಅದನ್ನು ಲೋಕಸಭಾ ಚುನಾವಣೆಗೆ ಮುನ್ನವೇ ನೋಟಿಫೈ ಮಾಡಲಾಗುತ್ತದೆ. ಅದರಲ್ಲಿ ಯಾವುದೇ ಗೊಂದಲಗಳಿಲ್ಲ. ಸಿಎಎ ವಿರುದ್ಧ ನಮ್ಮ ಮುಸ್ಲಿಂ ಸಹೋದರರನ್ನು ದಾರಿ ತಪ್ಪಿಸುವುದರ ಜೊತೆಗೆ ಪ್ರಚೋದಿಸಲಾಗುತ್ತಿದೆ. ಈ ಕಾಯ್ದೆ ಕೇವಲ ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಲ್ಲಿ ಕಿರುಕುಳ ಅನುಭವಿಸಿ ಭಾರತಕ್ಕೆ ಬಂದವರಿಗೆ ಪೌರತ್ವ ನೀಡಲು ಉದ್ದೇಶಿಸಲಾಗಿದೆ. ಸಿಎಎ ಯಾರೊಬ್ಬರ ಭಾರತೀಯ ಪೌರತ್ವ ಕಸಿದುಕೊಳ್ಳಲು ಅಲ್ಲ ಎಂದು ಅವರು ತಿಳಿಸಿದರು.
ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಭಾರತೀಯ ಜನತಾ ಪಾರ್ಟಿ 370 ಹಾಗೂ ಎನ್ ಡಿಎ 400ಕ್ಕೂ ಅಧಿಕ ಸ್ಥಾನಗಳನ್ನು ಗಳಿಸಲಿದೆ. ಈ ಮೂಲಕ ಸತತ 3ನೇ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ರಚನೆಯಾಗಲಿದೆ. ಲೋಕಸಭೆ ಚುನಾವಣೆಯ ಫಲಿತಾಂಶದ ಬಗ್ಗೆ ಯಾವುದೇ ಸಸ್ಪೆನ್ಸ್ ಇಲ್ಲ. ಈ ಬಾರಿಯೂ ಕೂಡ ಕಾಂಗ್ರೆಸ್ ಹಾಗೂ ಅದನ್ನು ಬೆಂಬಲಿಸುವಂತ ಎಲ್ಲಾ ಪಕ್ಷಗಳು ವಿರೋಧ ಪಕ್ಷಗಳಾಗಿಯೇ ಉಳಿಯಲಿವೆ ಎಂದು ಅವರು ತಿಳಿಸಿದ್ದಾರೆ.
ಬಿಜೆಪಿ ಸರ್ಕಾರ ಜಮ್ಮು-ಕಾಶ್ಮೀರದಲ್ಲಿದ್ದ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಿದೆ. ಆದ್ದರಿಂದ ದೇಶದ ಜನರು ಬಿಜೆಪಿಗೆ 370 ಸ್ಥಾನ ಹಾಗೂ ಎನ್ ಡಿಎಗೆ 400ಕ್ಕೂ ಹೆಚ್ಚು ಸ್ಥಾನಗಳನ್ನು ನೀಡಿ ಆಶೀರ್ವದಿಸುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಬಾರಿಯ ಲೋಕಸಭಾ ಚುನಾವಣೆಯು ಎನ್ ಡಿಎ ಮತ್ತು ಇಂಡಿಯಾ ಒಕ್ಕೂಟದ ನಡುವಿನ ಚುನಾವಣೆ ಆಗಿರುವುದಿಲ್ಲ. ಬದಲಿದೆ ಇದು ಅಭಿವೃದ್ಧಿ ಮತ್ತು ಜನರಿಗೆ ನೀಡಿರುವ ಭರವಸೆಯ ಚುನಾವಣೆ ಆಗಲಿದೆ ಎಂದು ಅವರು ತಿಳಿಸಿದರು.