ಬೆಂಗಳೂರು, ಫೆ 10 (DaijiworldNews/HR): ಗುಂಡು ಹೊಡೆಯುವುದಾದರೆ ನಾನೇ ಈಶ್ವರಪ್ಪನವರ ಮನೆಗೆ ಹೋಗುತ್ತೇನೆ. ನನಗೆ ಅವರೇ ಗುಂಡು ಹೊಡೆಯಲಿ ಎಂದು ಸಂಸದ ಡಿ.ಕೆ.ಸುರೇಶ್ ತಿರುಗೇಟು ನೀಡಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮಹಾತ್ಮ ಗಾಂಧಿಯವರನ್ನ ಕೊಂದ ಪಕ್ಷ ಅವರದ್ದು. ನಾನೊಬ್ಬ ಸಣ್ಣ ವ್ಯಕ್ತಿ. ಕನ್ನಡಿಗರ ಪರವಾಗಿ ಮಾತನಾಡಿದ್ದಕ್ಕೆ ಹೀಗೆ ಹೇಳಿರಬಹುದು. ಪಕ್ಷದಲ್ಲಿ ಅವರನ್ನ ಮೂಲೆ ಗುಂಪು ಮಾಡಿದ್ದಾರೆ. ಅದಕ್ಕೆ ಈಗ ಗಮನ ಸೆಳೆಯಲು ಮಾತನಾಡುತ್ತಿದ್ದಾರೆ ಎಂದರು.
ಇನ್ನು ನಾನು ಡಿ.ಕೆ.ಸುರೇಶ್ ಗೆ ಗುಂಡು ಹೊಡೆಯಿರಿ ಅಂತ ಹೇಳಿಲ್ಲ ಎಂಬ ಈಶ್ವರಪ್ಪ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಕನ್ನಡ, ಕರ್ನಾಟಕದ ಪರ ಧ್ವನಿ ಎತ್ತಿದ್ದಕ್ಕೆ ಗುಂಡಿಕ್ಕಿ ಕೊಲ್ಲಿ ಅಂತ ಹೇಳಿದ್ದಾರೆ ಎಂಬ ವರದಿ ಬರುತ್ತಿದೆ. ಬಿಜೆಪಿಯವರು ನಿಮ್ಮನ್ನು ಮೂಲೆಗುಂಪು ಮಾಡಿದ್ದಾರೆ ಅನಿಸತ್ತೆ. ಅದಕ್ಕೆ ಆಗಾಗ ಏನೇನೋ ಮಾತಾಡ್ತಿದ್ದೀರಿ. ಬೇರೆಯವರು ಯಾಕೆ ಗುಂಡಿಟ್ಟು ಕೊಲ್ಲಬೇಕು, ದಯವಿಟ್ಟು ನೀವೇ ಆ ಆಸೆಯನ್ನು ಈಡೇರಿಸಿಕೊಳ್ಳಿ ಎಂದಿದ್ದಾರೆ.