ಕಾರವಾರ, ಫೆ 10 (DaijiworldNews/AA): ಪತಿಯೊಂದಿಗೆ ಮನಸ್ತಾಪ ಉಂಟಾಗಿ ಗೋಕರ್ಣದಿಂದ ನಾಪತ್ತೆಯಾಗಿದ್ದ ಜಪಾನ್ ದೇಶದ ಪ್ರವಾಸಿ ಮಹಿಳೆ ಕೇರಳದ ತಿರುವನಂತಪುರದಲ್ಲಿ ಶುಕ್ರವಾರ ಪತ್ತೆಯಾಗಿದ್ದಾರೆ.
ಎಮಿ ಯಮಾಝಕಿ (43) ನಾಪತ್ತೆಯಾಗಿದ್ದ ಮಹಿಳೆ. ಇವರು ಫೆಬ್ರವರಿ 4ರಂದು ಗೋಕರ್ಣ ನೇಚರ್ ಕಾಟೇಜ್ ನಲ್ಲಿ ಪತಿಯೊಂದಿಗೆ ವಾಸ್ತವ್ಯ ಹೂಡಿರುತ್ತಾರೆ. ಆದರೆ ಫೆಬ್ರವರಿ 5 ರಂದು ಬೆಳಗ್ಗೆ ಕಾಟೇಜ್ನಿಂದ ಹೊರಬಂದಿದ್ದ ಅವರು ಬಳಿಕ ನಾಪತ್ತೆಯಾಗಿರುತ್ತಾರೆ. ಇನ್ನು ಪತ್ನಿ ನಾಪತ್ತೆಯಾದ ಬಗ್ಗೆ ಪತಿ ದೈ ಯಮಾಝಕಿ ಅವರು ಗೋಕರ್ಣ ಪೊಲೀಸ್ ಠಾಣೆಗೆ ದೂರು ನೀಡಿದ್ದರು.
ಪತಿಯ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡ ಗೋಕರ್ಣ ಪೊಲೀಸರು ವಿಶೇಷ ತಂಡವನ್ನು ರಚನೆ ಮಾಡಿದ್ದರು. ಇನ್ನು ನಾಪತ್ತೆಯಾಗಿದ್ದ ಎಮಿ ಆನ್ ಲೈನ್ ನಲ್ಲಿ ಇರುವ ಬಗ್ಗೆ ಪತ್ತೆ ಮಾಡಿದ್ದ ಪೊಲೀಸರು ಲೊಕೇಶನ್ ಟ್ರ್ಯಾಕ್ ಮಾಡಿ ಆಕೆಯು ಕೇರಳದಲ್ಲಿ ಇರುವ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ. ಬಳಿಕ ಪಿಎಸ್ಐ ಖಾದರ್ ಬಾಷಾ, ಸುಧಾ ಅಘನಾಶಿನಿ ನೇತೃತ್ವದ ವಿಶೇಷ ತಂಡ ಕೇರಳಕ್ಕೆ ತೆರಳಿ ಎಮಿ ಅವರನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಫೆಬ್ರವರಿ 4ರಂದು ಕಾಟೇಜ್ ನಲ್ಲಿ ತಂಗಿದ್ದ ವೇಳೆ ದಂಪತಿ ನಡುವೆ ಮನಸ್ತಾಪ ಉಂಟಾಗಿತ್ತು. ಬಳಿಕ ಪತಿಯ ಮೇಲಿನ ಕೋಪದಿಂದ ಗೋಕರ್ಣದ ರೈಲ್ವೆ ನಿಲ್ದಾಣಕ್ಕೆ ತೆರಳಿ ಅಲ್ಲಿಂದ ಕೇರಳ ತಲುಪಿರುವುದಾಗಿ ಎಮಿ ಅವರು ಮಾಹಿತಿ ನೀಡಿದ್ದಾರೆ.