ಮಧ್ಯಪ್ರದೇಶ, ಫೆ 10 (DaijiworldNews/AA): ಯುಪಿಎಸ್ ಸಿ ಪರೀಕ್ಷೆಯನ್ನು ಬರೆಯುವ ಕೆಲ ಅಭ್ಯರ್ಥಿಗಳು ತಮ್ಮ ಮೊದಲನೇ ಪ್ರಯತ್ನದಲ್ಲೇ ಉತ್ತೀರ್ಣರಾಗುತ್ತಾರೆ. ಆದರೆ ಕೆಲವರು ಮಾತ್ರ ಹಲವು ಪ್ರಯತ್ನಗಳ ಬಳಿಕವಷ್ಟೇ ಪರೀಕ್ಷೆಯಲ್ಲಿ ಉತ್ತೀರ್ಣರಾಗಲು ಸಫಲರಾಗುತ್ತಾರೆ. ಹೀಗೆ ತಮ್ಮ ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದು ಐಆರ್ ಎಸ್ ಅಧಿಕಾರಿಯಾದ ಝೆಬಾ ಖಾನ್ ಅವರ ಯಶೋಗಾಥೆ ಇದು.
ಝೆಬಾ ಖಾನ್ ಅವರು ಮೂಲತಃ ಮಧ್ಯಪದೇಶದ ಗುನಾ ಜಿಲ್ಲೆಯವರು. ಝೆಬಾ ಅವರ ತಂದೆ ಪ್ರಾಥಮಿಕ ಶಾಲೆಯ ಶಿಕ್ಷಕರು ಹಾಗೂ ತಾಯಿ ಗೃಹಿಣಿ. ತನ್ನ ಶಾಲಾ ಶಿಕ್ಷಣವನ್ನು ಗುನಾ ಜಿಲ್ಲೆಯಲ್ಲೇ ಮುಗಿಸಿದ ಝೆಬಾ ಅವರು, ಇಂದೋರ್ ನಲ್ಲಿ ಎಲೆಕ್ಟ್ರಾನಿಕ್ಸ್, ಗಣಿತ ಮತ್ತು ಭೌತಶಾಸ್ತ್ರದಲ್ಲಿ ಬಿಎಸ್ ಸಿ ಪದವಿ ಪಡೆಯುತ್ತಾರೆ
ಝೆಬಾ ಅವರು ತಾವು 11-12 ನೇ ತರಗತಿ ಓದುತ್ತಿರುವಾಗಲೇ ಯುಪಿಎಸ್ ಸಿ ಪರೀಕ್ಷೆ ಬರೆಯಬೇಕೆಂದು ನಿರ್ಧರಿಸಿದ್ದರು. ತನ್ನ ಕಾಲೇಜು ದಿನಗಳಲ್ಲೇ ಯುಪಿಎಸ್ ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಅವರು ಪರೀಕ್ಷೆಗಾಗಿ ಇಂದೋರ್ ನಲ್ಲಿ ಕೋಚಿಂಗ್ ಗೆ ಸೇರಿಕೊಳ್ಳುತ್ತಾರೆ.
ಝೆಬಾ ಅವರು ತನ್ನ ಪದವಿ ಶಿಕ್ಷಣ ಮುಗಿದ ಬಳಿಕ ಮುಂದಿನ ಯುಪಿಎಸ್ ಸಿ ತಯಾರಿಗಾಗಿ ದೆಹಲಿಗೆ ತೆರಳುತ್ತಾರೆ. ಝೆಬಾ ಅವರು ಯುಪಿಎಸ್ ಸಿ ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದ ವೇಳೆ ಯಾವುದೇ ಸಾಮಾಜಿಕ ಮಾಧ್ಯಮವನ್ನು ಬಳಸುತ್ತಿರಲಿಲ್ಲ. ಜೊತೆಗೆ ವೇಳಾಪಟ್ಟಿ ಹಾಕಿಕೊಂಡು ಯುಪಿಎಸ್ ಸಿ ಪರೀಕ್ಷೆಗೆ ಅಧ್ಯಯನ ನಡೆಸುತ್ತಿದ್ದರು.
ಝೆಬಾ ಅವರು ಸತತ ಎರಡು ಬಾರಿ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುವಲ್ಲಿ ವಿಫಲರಾಗುತ್ತಾರೆ. ಬಳಿಕ ಅವರು 2020 ರಲ್ಲಿ ಅಂತಿಮವಾಗಿ ತನ್ನ ಮೂರನೇ ಪ್ರಯತ್ನದಲ್ಲಿ ಯುಪಿಎಸ್ ಸಿ ಪರೀಕ್ಷೆ ಬರೆದು ಉತ್ತೀರ್ಣರಾಗುತ್ತಾರೆ. ಜೊತೆಗೆ 423ನೇ ಅಖಿಲ ಭಾರತ ಶ್ರೇಣಿಯನ್ನು ಪಡೆಯುವುದರೊಂದಿಗೆ ಝೆಬಾ ಖಾನ್ ಅವರು ಐಆರ್ ಎಸ್ ಅಧಿಕಾರಿಯಾಗುತ್ತಾರೆ. ಝೆಬಾ ಅವರು ಎಂಪಿಪಿಎಸ್ ಸಿ ಪರೀಕ್ಷೆಯನ್ನು ಸಹ ಬರೆದಿರುತ್ತಾರೆ. ಪ್ರಸ್ತುತ ಝೆಬಾ ಅವರು ಆದಾಯ ತೆರಿಗೆ ಇಲಾಖೆಯಲ್ಲಿ ಸಹಾಯಕ ಆಯುಕ್ತರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.