ನವದೆಹಲಿ, ಫೆ 8(DaijiworldNews/SK): ಪ್ರಧಾನಿ ನರೇಂದ್ರ ಮೋದಿ ಅವರು ಒಬಿಸಿ ಜಾತಿಯಲ್ಲಿ ಹುಟ್ಟಿಲ್ಲ ಮತ್ತು ಅವರು ಗುಜರಾತ್ ಸಿಎಂ ಆದ ಮೇಲೆ OBC ಜಾತಿಯನ್ನು ಸೂಚಿಸಿದ್ದಾರೆ ಎಂದಿರುವ ರಾಹುಲ್ ಗಾಂಧಿ ಆರೋಪಕ್ಕೆ ಕೇಂದ್ರ ಸಂಸದೀಯ ಸಚಿವ ಪ್ರಹ್ಲಾದ್ ಜೋಶಿ ಅವರು ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಕಿಡಿಕಾರಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಮೋದಿಯವರು ಗುಜರಾತ್ ಮುಖ್ಯಮಂತ್ರಿಯಾಗುವ 2 ವರ್ಷಗಳ ಮೊದಲು 1999ರ ಅಕ್ಟೋಬರ್ 27ರಂದು ಅವರ OBC ಸ್ಥಾನಮಾನವನ್ನು ಗುರುತಿಸಲಾಗಿದೆ ಎಂಬ ದಾಖಲೆ ಸಮೇತ ಸ್ಪಷ್ಟಪಡಿಸಿದ ಪ್ರಹ್ಲಾದ್ ಜೋಶಿ ಅವರು, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ನಾಚಿಕೆಯೇ ಎಂಬುದೇ ಇಲ್ಲ. ಬರೀ ಸುಳ್ಳು ಸುದ್ದಿಗಳನ್ನೇ ಹೇಳಿಕೊಂಡೆ ತಿರುಗಾಡುತ್ತಾರೆ.
ಕಾಂಗ್ರೆಸ್ ಪಕ್ಷದ ಸುಳ್ಳಿನ ಬುತ್ತಿಯನ್ನು ಎಳೆ ಎಳೆಯಾಗಿ ಬಿಚ್ಚಿಡುವ ಗಳಿಗೆ ಬಂದಿದೆ. ವಾಸ್ತವ ಬೇರೆಯೇ ಇರುವಾಗ ಕಾಂಗ್ರೆಸ್ ಬರೀ ಸುಳ್ಳುಗಳನ್ನೇ ಹೆಣೆದು ಜನರ ಕಿವಿಗೆ ಹೂವಿನ ಗೊಂಚಲೇ ಇಡುತ್ತಿದೆ ಎಂದು ಕಿಡಿ ಕಾರಿದ್ದಾರೆ.
ಇನ್ನು ಪ್ರಧಾನಿ ಮೋದಿ ಅವರನ್ನು ಒಬಿಸಿ ಅಲ್ಲ ಎನ್ನುವ ಮೂಲಕ ಕಾಂಗ್ರೆಸ್ ಮತ್ತೊಮ್ಮೆ ಇಡೀ ಒಬಿಸಿ ಸಮುದಾಯವನ್ನೇ ಅವಮಾನಿಸಿದೆ. ಒಬಿಸಿ ವರ್ಗದವರೆಲ್ಲ ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಉತ್ತರ ನೀಡಿ ರಾಹುಲ್ ಗಾಂಧಿ ಆರೋಪಕ್ಕೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಜೋಶಿ ಎಚ್ಚರಿಸಿದ್ದಾರೆ.