ಬೆಂಗಳೂರು,ಫೆ 8(DaijiworldNews/AK): ಕಾಂಗ್ರೆಸ್ ಸರ್ಕಾರದಲ್ಲೂ ಶೇ 40ರಷ್ಟು ಕಮಿಷನ್ ಮುಂದುವರಿದಿದೆ. ಬಿಜೆಪಿ ಸರ್ಕಾರದಲ್ಲಿ ಶಾಸಕರು ನೇರವಾಗಿ ಕಮಿಷನ್ ಪಡೆಯುತ್ತಿದ್ದರು. ಆದರೆ ಕಾಂಗ್ರೆಸ್ ಸರ್ಕಾರದಲ್ಲಿ ಅಧಿಕಾರಿಗಳ ಮೂಲಕ ಕಮಿಷನ್ ಸಂಗ್ರಹವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಿ. ಕೆಂಪಣ್ಣ ಆರೋಪಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರದ ಪ್ರತಿ ಇಲಾಖೆಗಳಲ್ಲೂ ಅಧಿಕಾರಿಗಳು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಸಚಿವರು, ಶಾಸಕರಿಗೆ ನೀಡಬೇಕು ಎಂದು ಗುತ್ತಿಗೆದಾರರಿಂದ ಕಮಿಷನ್ ವಸೂಲಿ ಮಾಡುತ್ತಿದ್ದಾರೆ .ಕೆಲಸ ಆಗಬೇಕಾದರೆ ಕಮಿಷನ್ ಕೊಡಬೇಕು. ನಾವು ಮೇಲಿನವರಿಗೆ ಫೀಡ್ ಮಾಡಬೇಕು. ಏಕೆ ಕಮಿಷನ್ ನೀಡಬೇಕು ಎಂದು ಮುಖ್ಯ ಎಂಜಿನಿಯರ್ಗಳನ್ನು ಕೇಳಿದ್ರೆ ಸಚಿವರು, ಶಾಸಕರತ್ತ ಬೆರಳು ಮಾಡಿ ತೋರಿಸುತ್ತಾರೆ ಎಂದರು.
ಯಾವ ಯಾವ ಅಧಿಕಾರಿಗಳು ಕಮಿಷನ್ ಕೇಳುತ್ತಾರೆ ಎಂಬ ಬಗ್ಗೆ ನಮಗೆ ಸಂಪೂರ್ಣ ಮಾಹಿತಿ ಇದೆ. ಇನ್ನಷ್ಟು ದಾಖಲೆಗಳನ್ನು ಸಂಗ್ರಹಿಸಲಾಗುತ್ತಿದೆ .ಈಗಾಗಲೇ ಹಲವು ಮೊಕದ್ದಮೆ ನನ್ನ ಮೇಲೆ ದಾಖಲಾಗಿವೆ. ಸದ್ಯಕ್ಕೆ ಯಾರ ಹೆಸರು ಬಹಿರಂಗಪಡಿಸುವುದಿಲ್ಲ. ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಯವರಿಗೆ ದೂರು ನೀಡುತ್ತೇನೆ. ಪ್ರತಿಪಕ್ಷದ ನಾಯಕ ಆರ್. ಅಶೋ ಕ ಅವರನ್ನೂ ಭೇಟಿ ಮಾಡಿ ಕಮಿಷನ್ ಹಾಗೂ ಪ್ಯಾಕೇಜ್ ಟೆಂಡರ್ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಹೇಳಿದರು.
ಈ ಮೂಲಕ ಸ್ಥಳೀಯ ಗುತ್ತಿಗೆದಾರರನ್ನು ದೂರವಿಟ್ಟು ನೆರೆ ರಾಜ್ಯದ ಗುತ್ತಿಗೆದಾರರನ್ನು ಓಲೈಸುವ ತಂತ್ರದಿಂದ ಹೀಗೆ ಮಾಡಲಾಗುತ್ತಿದೆ. ಪ್ಯಾಕೇಜ್ ಪದ್ಧತಿಯಿಂದ ರಾಜ್ಯದ ಸ್ಥಳೀಯ, ಸಣ್ಣ, ಮಧ್ಯಮ ಗುತ್ತಿಗೆದಾರರಿಗೆ ಸಮಸ್ಯೆಯಾಗುತ್ತಿದೆ. ಅವರಿಗೆ ಕಾಮಗಾರಿಗಳು ಸಿಗುತ್ತಿಲ್ಲ ಎಂದು ಆರೋಪಿಸಿದರು.