ನವದೆಹಲಿ,ಫೆ 8(DaijiworldNews/SK): ಸಂಸತ್ತಿನಲ್ಲಿ 'ಬಿಜೆಪಿ ಸಂಸದ ತೇಜಸ್ವಿ ಸೂರ್ಯ ಅವರ ಮಾತಿನ ನಂತರ ಕಲಾಪ ಅಂತ್ಯಗೊಳಿಸಿ, ರಾಜ್ಯದ ಪರ ಸುರೇಶ್ ಅವರಿಗೆ ಧ್ವನಿ ಎತ್ತಲು ಅವಕಾಶ ಕೊಡದೆ ಅನ್ಯಾಯ ಮಾಡಲಾಗಿದೆ. ಇದ್ದರಿಂದ ನಮ್ಮ ಧ್ವನಿ ಅಡಗಿಸುವ ಯತ್ನ ನಡೆದಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ದೆಹಲಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಡಿ.ಕೆ.ಶಿವಕುಮಾರ್ ಅವರು, ಕಲಾಪದಲ್ಲಿ ಬಿಜೆಪಿ ಸಂಸದ ತೇಜಸ್ವಿ ಸೂರ್ಯ ರಾಜ್ಯದ ಪರವಾಗಿ ಮಾತನಾಡದೆ ಪಕ್ಷಪಾತಿಯಾಗಿ ಮಾತನಾಡುತ್ತಿದ್ದರು. ನಮ್ಮ ಪಕ್ಷದ ಎಲ್ಲಾ ಮಂತ್ರಿಗಳು, ಶಾಸಕರು, ಸಂಸದರು ದೆಹಲಿಗೆ ಬಂದು ರಾಜ್ಯದ ಪರ ಮಾತನಾಡಿದ್ದಾರೆ. ಈ ಬಗ್ಗೆ ಬಿಜೆಪಿ ಎಂಪಿಗಳಿಗೆ ನಾಚಿಕೆಯಾಗಬೇಕು' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇನ್ನು 'ಕೇಂದ್ರ ಬಜೆಟ್ ಅನ್ನು ನಾನು ತಯಾರು ಮಾಡಿಲ್ಲ, ಕೇಂದ್ರ ಸರ್ಕಾರವೇ ತಯಾರು ಮಾಡಿದೆ. ಅದರಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ 5,300 ಕೋಟಿ ಕೊಡುತ್ತೇವೆ ಎಂದು ಹೇಳಿದ್ದರು. ಹಣಕಾಸು ಆಯೋಗ ಬೆಂಗಳೂರಿಗೆ 5-6 ಸಾವಿರ ಕೋಟಿ ಕೊಡಬೇಕು ಎಂದು ಶಿಫಾರಸ್ಸು ಮಾಡಿತ್ತು, ಇವನ್ನು ಕೊಟ್ಟಿದ್ದಾರೆಯೇ?‘ ಮುಖ್ಯಮಂತ್ರಿಗಳು ಮತ್ತು ಸಚಿವರಾದ ಕೃಷ್ಣಬೈರೇಗೌಡರು ಬರಪರಿಹಾರ ಬಿಡುಗಡೆ ಮಾಡಲು ಮನವಿ ಕೊಟ್ಟರೂ ಏಕೆ ಒಂದೂ ರೂಪಾಯಿಯನ್ನೂ ಬಿಡುಗಡೆ ಮಾಡಿಲ್ಲ. ಈ ಮೂಲಕ ಕೇಂದ್ರ ಸರ್ಕಾರ ರಾಜ್ಯದ ಪ್ರತಿ ಬಡವರ ಹೊಟ್ಟೆ ಮೇಲೆ ಹೊಡೆಯುತ್ತಿದೆ' ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.