ಶಿವಮೊಗ್ಗ , ಫೆ 08 (DaijiworldNews/PC): ಅಪ್ರಾಪ್ತನಿಗೆ ಬೈಕ್ ಚಲಾಯಿಸಲು ಕೊಟ್ಟ ಕಾರಣಕ್ಕೆ ವಾಹನವನ್ನು ನೀಡಿದ ವಾಹನ ಮಾಲಿಕರಿಗೆ ಶಿವಮೊಗ್ಗ ಜಿಲ್ಲಾ ನ್ಯಾಯಾಲಯ 30 ಸಾವಿರ ರೂಪಾಯಿ ದಂಡ ವಿಧಿಸಿದ ಘಟನೆ ನಡೆದಿದೆ.
ಶಿವಮೊಗ್ಗ ಪೂರ್ವ ಸಂಚಾರಿ ಠಾಣೆ ಪಿಎಸ್ ಐ ನವೀನ್ ಕುಮಾರ್ ಮಠಪತಿ ಅವರು ಶಿವಮೊಗ್ಗ ನಗರದ ಎಸ್ ಪಿ.ಎಂ ರಸ್ತೆಯ ಕೋಟೆ ಆಂಜನೇಯ ಸ್ವಾಮಿ ದೇವಾಲಯದ ಹತ್ತಿರ 2024 ರ ಜ. 30 ರಂದು ವಾಹನ ತಪಾಸಣೆ ಮಾಡುತ್ತಿದ್ದರು. ಈ ಸಂಧರ್ಭದಲ್ಲಿ 17 ವರ್ಷದ ಹುಡುಗನೊಬ್ಬ ಮೊಪೆಡ್ ಅನ್ನು ಚಾಲನೆ ಮಾಡಿಕೊಂಡು ಬಂದಿದ್ದಾನೆ.
ಈ ತಪಾಸಣೆ ವೇಳೆ ಅದನ್ನು ಗಮನಿಸಿದ ಪಿಎಸ್ಐ ಅಪ್ರಾಪ್ತನಿಗೆ ವಾಹನವನ್ನು ಚಾಲನೆ ಮಾಡಲು ಅವಕಾಶ ನೀಡಿದ ವಾಹನದ ಮಾಲೀಕರಾದ ತಾಯಿ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನು ದಾಖಲಿಸಿದ್ದರು.
ಪ್ರಕರಣ ಸಂಬಂಧ ಘನ ನ್ಯಾಯಾಲಯಕ್ಕೆ ದೋಷಾರೋಪಣಾ ವರದಿಯನ್ನು ಸಲ್ಲಿಸಿದ್ದರು. ಇದೀಗ ಕೋರ್ಟ್ ಮೊಪೆಡ್ ವಾಹನದ ಮಾಲೀಕರಿಗೆ 30 ಸಾವಿರ ರೂ ದಂಡ ವಿಧಿಸಿದೆ.