ಬೆಂಗಳೂರು ಫೆ 07(DaijiworldNews/MS): ವ್ಹೀಲಿಂಗ್ ಹಾಗೂ ರ್ಯಾಶ್ ಡ್ರೈವಿಂಗ್ ಮಾಡುತ್ತಿದ್ದ ಬಗ್ಗೆ ಬುದ್ದಿವಾದ ಹೇಳಿದ ಯುವಕನಿಗೆ , ಅನ್ಯಕೋಮಿನ ಯುವಕರು ಚಾಕುವಿನಿಂದ ಇರಿದ ಘಟನೆ ಫೆ.6ರ ಮಂಗಳವಾರ ರಾತ್ರಿ ಪಟ್ಟಣದ ದೊಡ್ಡಪೇಟೆಯಲ್ಲಿ ನಡೆದಿದೆ.
ಚೂರಿ ಇರಿತದಿಂದ ಗಂಭೀರ ಗಾಯಗೊಂಡ ಯುವಕ ದೊಡ್ಡಪೇಟೆ ನಿವಾಸಿ ಸುಶೀಲ್(23) ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಶಿವಮೊಗ್ಗ ಆಸ್ಪತ್ರೆಗೆ ರವಾನಿಸಲಾಗಿದೆ.
ಕಳೆದ ಕೆಲ ತಿಂಗಳಿನಿಂದ ಯುವಕರು ನಿರಂತರವಾಗಿ ಬೈಕ್ ವ್ಹೀಲಿಂಗ್ ಮಾಡಿ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದರು. ಮಂಗಳವಾರ ರಾತ್ರಿ ಮತ್ತೆ ವೀಲಿಂಗ್ ಮಾಡುತ್ತಿದ್ದಾಗ ಯುವಕನೊಬ್ಬನಿಗೆ ಸುಶೀಲ್ ಬುದ್ಧಿವಾದ ಹೇಳಿದ್ದಾನೆ. ಈ ಸಂದರ್ಭದಲ್ಲಿ ಆ ಯುವಕ, ಸುಶೀಲ್ಗೆ ಆವಾಜ್ ಹಾಕಿ ಅಲ್ಲಿಂದ ತೆರಳಿದ್ದಾನೆ. ಆ ಬಳಿಕ ನಾಲ್ವರು ಯುವಕರ ತಂಡದೊಂದಿಗೆ ಆಗಮಿಸಿ ವಾಗ್ವಾದ ನಡೆಸಿ ಬಳಿಕ ಹೊಟ್ಟೆ ಹಾಗೂ ಎದೆ ಭಾಗಕ್ಕೆ ಚಾಕುವಿನಿಂದ ಇರಿದು ತಂಡ ಪರಾರಿಯಾಗಿದೆ. ಘಟನೆ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಹಾಗೂ ಸಂಸದ ಬಿ.ವೈ. ರಾಘವೇಂದ್ರ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಆಸ್ಪತ್ರೆ ಮುಂದೆ ನೂರಾರು ಜನ ಜಮಾಯಿಸಿದ್ದರಿಂದ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ.
ಚಾಕು ಇರಿತ ಸಂಬಂಧಿಸಿದಂತೆ ಆರೋಪಿಗಳನ್ನು ಶೀಘ್ರ ಬಂಧಿಸುವಂತೆ ಹಿಂದೂ ಸಂಘಟನೆ ಪದಾಧಿಕಾರಿಗಳು ಹಾಗೂ ಸ್ಥಳೀಯರು ಒತ್ತಾಯಿಸಿದ್ದಾರೆ. ಘಟನೆ ಸಂಬಂಧ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ, ಉಳಿದವರ ಬಂಧನಕ್ಕೆ ಮೂರು ಪ್ರತ್ಯೇಕ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಶಿವಮೊಗ್ಗದಲ್ಲಿ ಪ್ರತಿಕ್ರಿಯಿಸಿದ್ದಾರೆ.