ಬೆಳಗಾವಿ, ಫೆ 06 (DaijiworldNews/AA): ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಮಾಲೀಕತ್ವದ ಸಕ್ಕರೆ ಕಾರ್ಖಾನೆ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಅಫೆಕ್ಸ್ ಬ್ಯಾಂಕ್ ನಲ್ಲಿ ಕಾರ್ಖಾನೆ ಸ್ಥಾಪನೆಗೆ ಸಾಲ ಪಡೆದು ಮರುಪಾವತಿ ಮಾಡದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಗೋಕಾಕ್ ನ ಚಿಕ್ಕನಂದಿ ಗ್ರಾಮದ ಸಮೀಪದ ಸೌಭಾಗ್ಯಲಕ್ಷ್ಮಿ ಶುಗರ್ ಲಿ. ಫ್ಯಾಕ್ಟರಿ ಮೇಲೆ ಸಿಐಡಿ ಅಧಿಕಾರಿಗಳು ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.
ಕಾರ್ಖಾನೆ ಸ್ಥಾಪನೆಗೆಂದು 439 ಕೋಟಿ ರೂ. ಅನ್ನು ಸಾಲ ಪಡೆಯಲಾಗಿದೆ. ಇದೀಗ ಸಾಲ ಮರು ಪಾವತಿಸದೆ ಮೋಸ ಮಾಡುವ ಉದ್ದೇಶ ಹೊಂದಿದ್ದಾರೆ ಎಂದು ಅಪೆಕ್ಸ್ ಬ್ಯಾಂಕ್ ಮ್ಯಾನೇಜರ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು.
ಬ್ಯಾಂಕ್ ನಿಂದ ಸಾಲ ಪಡೆಯುವಾಗ ರಮೇಶ್ ಜಾರಕಿಹೊಳಿ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು ಹಾಗೂ ವಸಂತ್, ಶಂಕರ್ ಎಂಬುವವರು ನಿರ್ದೇಶಕರಾಗಿದ್ದರು. ಬ್ಯಾಂಕ್ ನಿಂದ ಸಾಲ ಪಡೆದಿರುವ ವೇಳೆ ನಿರ್ದೇಶಕರನ್ನು ಬದಲಿಸುವಂತಿಲ್ಲ ಎಂದು ಷರತ್ತು ಹಾಕಲಾಗಿತ್ತು. ಆದರೆ ಆರೋಪಿಗಳು ಕಂಪನಿಯಲ್ಲಿನ ಹುದ್ದೆಗಳಿಗೆ ರಾಜೀನಾಮೆ ನೀಡಿದ್ದು, ಬೇರೆಯವರನ್ನು ಆ ಹುದ್ದೆಗಳಿಗೆ ನೇಮಿಸಲಾಗಿತ್ತು. ಈ ವಿಷಯವನ್ನು ಬ್ಯಾಂಕ್ ಗೆ ತಿಳಿಸಿಲ್ಲ ಎಂದು ಬ್ಯಾಂಕ್ ನ ವ್ಯವಸ್ಥಾಪಕ ನಿರ್ದೇಶಕರು ದೂರು ನೀಡಿದ್ದರು. ಇದೀಗ ಈ ದೂರಿನ ಅನ್ವಯ ಆರೋಪಿಗಳ ವಿರುದ್ಧ ಐಪಿಸಿ ಸೆಕ್ಷನ್ 406, 420 ಹಾಗೂ 34ರ ಅಡಿ ಪ್ರಕರಣ ದಾಖಲಾಗಿದೆ.
ರಮೇಶ್ ಜಾರಕಿಹೊಳಿ ಅವರು ತಮ್ಮ ವಿರುದ್ಧ ದಾಖಲಾಗಿರುವ ದೂರು ಮತ್ತು ಎಫ್ ಐಆರ್ ರದ್ದುಗೊಳಿಸುವಂತೆ ಹೈಕೋರ್ಟ್ ಮೊರೆ ಹೋಗಿದ್ದರು. ಈ ಮಧ್ಯೆ ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದು, ಈ ಹಿನ್ನೆಲೆ ಇಂದು ನಾಲ್ಕು ಸಿಐಡಿ ಅಧಿಕಾರಿಗಳು ರಮೇಶ್ ಜಾರಕಹೊಳಿ ಅವರ ಫ್ಯಾಕ್ಟರಿ ಮೇಲೆ ದಾಳಿ ಮಾಡಿ, ದಾಖಲೆಗಳನ್ನು ಪರಿಶೀಲಿಸಿದ್ದಾರೆ.