ಡೆಹ್ರಾಡೂನ್,06 (DaijiworldNews/ AK): ಲಿವ್-ಇನ್ ರಿಲೇಶನ್ಶಿಪ್ನಲ್ಲಿರುವ ವ್ಯಕ್ತಿಗಳು ಅಥವಾ ಈ ಸಂಬಂಧದಲ್ಲಿರಲು ಯೋಜಿಸುತ್ತಿರುವವರು ಏಕರೂಪ ನಾಗರಿಕ ಸಂಹಿತೆ ಕಾನೂನಾಗಿ ಬಂದ ನಂತರ ಜಿಲ್ಲಾ ಅಧಿಕಾರಿಗಳ ಬಳಿ ಈ ಸಂಬಂಧ ಬಗ್ಗೆ ನೋಂದಾಯಿಸಿಕೊಳ್ಳಬೇಕು.
21 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಆಗಿದ್ದರೆ ಇದಕ್ಕೆ ಪೋಷಕರ ಒಪ್ಪಿಗೆ ಅಗತ್ಯವಿದೆ ಎಂದು ಉತ್ತರಾಖಂಡ ಸರ್ಕಾರ ಹೇಳಿದೆ. ಇದು ರಾಜ್ಯದ ಹೊರಗೆ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿರುವ ಯಾವುದೇ ಉತ್ತರಾಖಂಡದ ನಿವಾಸಿಗೂ ಅನ್ವಯಿಸಲಾಗುತ್ತದೆ.ಉತ್ತರಾಖಂಡ ಸರ್ಕಾರ ಏಕರೂಪ ನಾಗರೀಕ ಸಂಹಿತೆ ಜಾರಿಗೆ ಮುಂದಾಗಿದ್ದು ಈ ಸಂಬಂಧ ವಿಧಾನಸಭೆಯಲ್ಲಿ ಯುಸಿಸಿ ಮಂಡಿಸಲಾಗಿದೆ.
ಸಾರ್ವಜನಿಕ ನೀತಿ ಮತ್ತು ನೈತಿಕತೆಗೆ ವಿರುದ್ಧವಾದ ಪ್ರಕರಣಗಳಲ್ಲಿ ಲಿವ್-ಇನ್ ಸಂಬಂಧಗಳನ್ನು ನೋಂದಾಯಿಸಲಾಗುವುದಿಲ್ಲ. ಒಬ್ಬ ಸಂಗಾತಿ ವಿವಾಹಿತನಾಗಿದ್ದರೆ ಅಥವಾ ಇನ್ನೊಂದು ಸಂಬಂಧದಲ್ಲಿದ್ದರೆ, ಒಬ್ಬ ಸಂಗಾತಿ ಅಪ್ರಾಪ್ತ ವಯಸ್ಕನಾಗಿದ್ದರೆ ಮತ್ತು ಒಬ್ಬ ಸಂಗಾತಿಯ ಒಪ್ಪಿಗೆಯನ್ನು ಬಲಾತ್ಕಾರ, ವಂಚನೆಯಿಂದ ಪಡೆದಿದ್ದರೆ ನೋಂದಣಿ ಮಾಡಲಾಗುವುದಿಲ್ಲ.ಲಿವ್-ಇನ್ ಸಂಬಂಧದ ವಿವರಗಳನ್ನು ಸ್ವೀಕರಿಸಲು ವೆಬ್ಸೈಟ್ ಅನ್ನು ಸಿದ್ಧಪಡಿಸಲಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಗಳಲ್ಲಿ ತಮ್ಮ ಸಂಬಂಧವನ್ನು ನೋಂದಾಯಿಸಿಕೊಳ್ಳಬೇಕು. ಇಲ್ಲವಾದರೆ ಅಂಥ ಜೋಡಿಯನ್ನು ಜೈಲಿಗೆ ಕಳಿಸಬಹುದು. ಇದು ಪ್ರಸ್ತಾವಿತ ಏಕರೂಪ ನಾಗರಿಕ ಸಂಹಿತೆಯ ಕಠಿಣ ನಿಯಮವಾಗಿದೆ. ಇದಕ್ಕಾಗಿ ಅವರು ಈ ರೀತಿ ಸಂಬಂಧದಲ್ಲಿರುವ ಜೋಡಿಗಳಲ್ಲಿ ಒಬ್ಬರನ್ನು ಅಥವಾ ಪ್ರತ್ಯೇಕವಾಗಿ ಇಲ್ಲವೇ ಜತೆಯಾಗಿಯೂ ಕರೆಸಿಕೊಳ್ಳಬಹುದು. ನೋಂದಣಿಯನ್ನು ನಿರಾಕರಿಸಿದರೆ, ರಿಜಿಸ್ಟ್ರಾರ್ ತನ್ನ ಕಾರಣಗಳನ್ನು ಲಿಖಿತವಾಗಿ ತಿಳಿಸಬೇಕು.
ಲಿವ್-ಇನ್ ಸಂಬಂಧದ ಘೋಷಣೆಗಳನ್ನು ಸಲ್ಲಿಸಲು ವಿಫಲವಾದರೆ ಅಥವಾ ತಪ್ಪು ಮಾಹಿತಿಯನ್ನು ಒದಗಿಸಿದರೆ, ಒಬ್ಬನನ್ನು ಮೂರು ತಿಂಗಳವರೆಗೆ ಜೈಲು ಶಿಕ್ಷೆ, 25,000 ರೂ.ದಂಡ ಅಥವಾ ಎರಡನ್ನೂ ವಿಧಿಸಬಹುದು. ಯಾರಾದರೂ ಲಿವ್-ಇನ್ ಸಂಬಂಧವನ್ನು ನೋಂದಾಯಿಸಲು ವಿಫಲವಾದರೆ ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆ, 25,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ. ಒಂದು ತಿಂಗಳಷ್ಟೇ ನೋಂದಣಿ ವಿಳಂಬವಾದರೂ, ಮೂರು ತಿಂಗಳವರೆಗೆ ಜೈಲು ಶಿಕ್ಷೆ, 10,000 ದಂಡ ಅಥವಾ ಎರಡನ್ನೂ ವಿಧಿಸಲಾಗುತ್ತದೆ ಎಂದು ಹೇಳಿದೆ.