ನವದೆಹಲಿ, ಫೆ 06 (DaijiworldNews/AA): "ಪ್ರಧಾನಿ ಮೋದಿ ಮೇಲೆ ನಮಗೆ ಯಾವುದೇ ವಿಶ್ವಾಸ ಉಳಿದಿಲ್ಲ. ಮೋದಿ ಅವರು ಒಂದು ನಿರ್ದಿಷ್ಟ ಸಿದ್ಧಾಂತಕ್ಕಾಗಿ ಮಾತ್ರ ಕೆಲಸ ಮಾಡುತ್ತಿದ್ದಾರೆ" ಎಂದು ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ಧೀನ್ ಓವೈಸಿ ಟೀಕಿಸಿದ್ದಾರೆ.
ಜ್ಞಾನವಾಪಿ ಮಸೀದಿಯ ನೆಲಮಹಡಿಯಲ್ಲಿ ಪೂಜೆಗೆ ಅವಕಾಶ ನೀಡಿರುವ ವಾರಾಣಾಸಿಯ ಜಿಲ್ಲಾ ನ್ಯಾಯಾಲಯದ ಆದೇಶದ ಕುರಿತಂತೆ ಪ್ರತಿಕ್ರಿಯಿಸಿದ ಅವರು, "ಹಿಂದೂಗಳಿಗೆ ಯಾವುದೇ ಮಸೀದಿಗಳನ್ನು ಬಿಟ್ಟು ಕೊಡುವ ಮಾತೇ ಇಲ್ಲ. ಜ್ಞಾನವಾಪಿ ಪ್ರಕರಣವು ಬಾಬರಿ ಮಸೀದಿಗಿಂತ ಭಿನ್ನವಾಗಿದೆ. ಏಕೆಂದರೆ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಿರುವ ಸ್ಥಳದಲ್ಲಿ ಮುಸ್ಲಿಮರು ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ" ಎಂದು ವಾಗ್ದಾಳಿ ನಡೆಸಿದ್ದಾರೆ.
"ಜ್ಞಾನವಾಪಿ ಪ್ರಕರಣವಿನ್ನೂ ಕೊನೆಯಾಗಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರ್ಟ್ ಗೆ ಸೂಕ್ತ ದಾಖಲೆ ಸಲ್ಲಿಸುವ ಮೂಲಕ ನಾವು ಕಾನೂನು ಹೋರಾಟವನ್ನು ಮುಂದುವರೆಸುತ್ತೇವೆ. ಮುಸ್ಲಿಮರು ಬಾಬರಿ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿರಲಿಲ್ಲ ಎಂದು ಕೆಲವರು ವಾದಿಸುತ್ತಿದ್ದರು. ಆದರೆ ಜ್ಞಾನವಾಪಿಯಲ್ಲಿ ನಾವು ನಿರಂತರವಾಗಿ ಪ್ರಾರ್ಥನೆ ಸಲ್ಲಿಸುತ್ತಾ ಬರುತ್ತಿದ್ದೇವೆ" ಎಂದು ಹೇಳಿದ್ದಾರೆ.