ಬೆಂಗಳೂರು, 06 (DaijiworldNews/ AK): ಅನುದಾನದಲ್ಲಿ ತಾರತಮ್ಯ ಖಂಡಿಸಿ ನಾಳೆ ದೆಹಲಿಯ ಜಂತರ್ ಮಂತರ್ನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನೆ ನಡೆಯಲಿದೆ. ಈ ಪ್ರತಿಭಟನೆಯಲ್ಲಿ ಸಿಎಂ, ಡಿಸಿಎಂ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಈ ನಡುವೆ ಸರ್ಕಾರದ ಲೋಗೋ ಬಳಸಿ ಜಾಹೀರಾತು ನೀಡಿರುವುದನ್ನು ವಿರೋದಿಸಿ ರಾಜ್ಯ ಬಿಜೆಪಿ ಘಟಕವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.
ಜಾಹೀರಾತು ನೀಡಲು ರಾಜ್ಯದ ಜನರ ತೆರಿಗೆ ಹಣವನ್ನು ಬಳಸಿದ ಕುರಿತು ಆಕ್ಷೇಪಿಸುವ ಮನವಿಯನ್ನು ಅಧಿಕಾರಿಗಳ ಮೂಲಕ ರಾಜ್ಯಪಾಲರಿಗೆ ಸಲ್ಲಿಸಲಾಯಿತು.
ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ವಿಧಾನಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಹರತಾಳು ಹಾಲಪ್ಪ, ಮುಖಂಡ ಭಾಸ್ಕರ ರಾವ್, ವಕೀಲರ ಸಂಘದ ಅಧ್ಯಕ್ಷ ವಿವೇಕ ರೆಡ್ಡಿ ಅವರ ನಿಯೋಗವು ಈ ಮನವಿ ಸಲ್ಲಿಸಿತು.
ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುವ ರೀತಿಯ ಮತ್ತು ಈ ಮೂಲಕ ಸಂವಿಧಾನಕ್ಕೆ ಅಗೌರವ ತರುವ ಕೆಲಸವನ್ನು ಈ ಜಾಹೀರಾತಿನ ಮೂಲಕ ರಾಜ್ಯದ ಕಾಂಗ್ರೆಸ್ ಸರಕಾರ ಮಾಡಿದೆ ಎಂದು ಮನವಿ ಗಮನ ಸೆಳೆದಿದೆ. ‘ನನ್ನ ತೆರಿಗೆ ನನ್ನ ಹಕ್ಕು’ ಎಂಬ ಶೀರ್ಷಿಕೆಯ ಈ ಜಾಹೀರಾತಿನ ಮೂಲಕ ಕೇಂದ್ರ ಸರಕಾರದ ವಿರುದ್ಧ ದೆಹಲಿ ಚಲೋ ನಡೆಸಲು ಕರೆ ನೀಡಿದ್ದು ಆಘಾತಕರ ಎಂದು ತಿಳಿಸಲಾಗಿದೆ.
ರಾಜ್ಯದ ಜನರನ್ನು ತಪ್ಪು ದಾರಿಗೆಳೆಯುವ ಅಂಕಿಅಂಶಗಳನ್ನು ಈ ಜಾಹೀರಾತು ಒಳಗೊಂಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ರಾಜಕಾರಣ ಮಾಡಲು ಈ ಜಾಹೀರಾತು ಕೊಟ್ಟಿದ್ದಾರೆ. ಸರ್ಕಾರ ಜಾಹೀರಾತಿಗಾಗಿ 20 ಕೋಟಿ ರೂ. ಖರ್ಚು ಮಾಡಿದೆ. ಬರದ ವೇಳೆ ಬಿಡಿಗಾಸೂ ಬಿಡುಗಡೆ ಮಾಡದ ಸರ್ಕಾರ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.