ಬೆಂಗಳೂರು, 06 (DaijiworldNews/ AK):ರಾಜ್ಯದಲ್ಲಿ ಗೃಹಜ್ಯೋತಿ ಯೋಜನೆ ಅನುಷ್ಠಾನ ಯಶಸ್ವಿಗೊಂಡ ಹಿನ್ನೆಲೆಯಲ್ಲಿ ಕರ್ನಾಟಕದ ಮಾದರಿಯನ್ನು ಅನುಸರಿಸಲು ತೆಲಂಗಾಣ ಸರ್ಕಾರ ಮುಂದಾಗಿದೆ.
ತೆಲಂಗಾಣ ರಾಜ್ಯ ದಕ್ಷಿಣ ವಿದ್ಯುತ್ ವಿತರಣಾ ಕಂಪನಿಯ ಅಧ್ಯಕ್ಷರು ಮತ್ತು ವ್ಯವಸ್ಥಾಪಕ ನಿರ್ದೇಶಕರಾದ ಮುಷರಫ್ ಅಲಿ ಫರುಕಿ ಮತ್ತು ಅವರ ತಂಡವು, ತೆಲಂಗಾಣದಲ್ಲಿ ಉಚಿತ ವಿದ್ಯುತ್ ಯೋಜನೆಯನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ಬೆಸ್ಕಾಂ ನಿಗಮ ಕಚೇರಿಗೆ ಭೇಟಿ ನೀಡಿ ಅಧಿಕಾರಿಗಳಿಂದ ಯೋಜನೆ ಕುರಿತು ಮಾಹಿತಿ ಪಡೆದುಕೊಂಡಿದೆ.
ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕರಾದ ಮಹಾಂತೇಶ ಬೀಳಗಿ, ಬೆಸ್ಕಾಂನ ಹಣಕಾಸು ನಿರ್ದೇಶಕರಾದ ದರ್ಶನ್ ಜೆ. ಬೆಸ್ಕಾಂನ ಐಟಿ ಹಾಗೂ ಕಂದಾಯ ವಿಭಾಗದ ಅಧಿಕಾರಿಗಳ ಜೊತೆ ಚರ್ಚೆ ನಡೆಸಿ ಯೋಜನೆ ಕುರಿತು ತೆಲಂಗಾಣ ಅಧಿಕಾರಿಗಳು ಸಭೆ ನಡೆಸಿ ಗೃಹಜ್ಯೋತಿ ಬಗ್ಗೆ ಮಾಹಿತಿ ಪಡೆದಿದ್ದಾರೆ.
ತೆಲಂಗಾಣ ರಾಜ್ಯದಲ್ಲಿ ಇತ್ತೀಚೆಗಷ್ಟೇ ಚುನಾವಣೆ ನಡೆದಿತ್ತು. ಚುನಾವಣೆ ವೇಳೆ ಕರ್ನಾಟಕದಲ್ಲಿ ಘೋಷಣೆ ಮಾಡಿದಂತೆ 6 ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಲಾಗಿತ್ತು.
ಆ ಪೈಕಿ, ಹೆಣ್ಣು ಮಕ್ಕಳಿಗೆ ಉಚಿತ ಬಸ್ ಸೇವೆ ಮತ್ತು ಬಡವರಿಗೆ ಹತ್ತು ಲಕ್ಷ ರೂ.ವರೆಗೂ ವಿಮೆ ಒದಗಿಸುವ ಯೋಜನೆಗಳಿಗೆ ಮೊದಲ ಹಂತದಲ್ಲಿ ಡಿ. 9ರಂದು ಚಾಲನೆ ನೀಡಿದ್ದರು. ಇದೀಗ ಗೃಹ ಜ್ಯೋತಿ ಯೋಜನೆ ಜಾರಿಗೆ ತರಲು ಸಿದ್ಧತೆ ನಡೆಸುತ್ತಿದ್ದಾರೆ.