ಶಿವಮೊಗ್ಗ, ಫೆ 06 (DaijiworldNews/AA): "ತಮ್ಮ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯದಿಂದ ಅವರನ್ನು ಕಾಂಗ್ರೆಸ್ ಟ್ರಿಪ್ ಕರೆದುಕೊಂಡು ಹೋಗುತ್ತಿದ್ದಾರೆ" ಎಂದು ಕಾಂಗ್ರೆಸ್ ನ ದೆಹಲಿ ಚಲೋ ಪ್ರತಿಭಟನೆ ಬಗ್ಗೆ ಮಾಜಿ ಸಚಿವ ಕೆಎಸ್ ಈಶ್ವರಪ್ಪ ವ್ಯಂಗ್ಯವಾಡಿದ್ದಾರೆ.
ಶಿವಮೊಗ್ಗದಲ್ಲಿ ಮಾತನಾಡಿದ ಅವರು, ಅನುದಾನಕ್ಕೆ ಸಂಬಂಧಪಟ್ಟಂತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈಗಾಗಲೇ ಉತ್ತರ ನೀಡಿದ್ದಾರೆ. ಕಾಂಗ್ರೆಸ್ ನವರಿಗೆ ಸಮಾಧಾನ ತಂದಿಲ್ಲವೆಂದರೆ ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆ ಶಿವಕುಮಾರ್ ಮಾತ್ರ ದೆಹಲಿಗೆ ಹೋಗಿ ಮಾತನಾಡಬಹುದಿತ್ತು. ಆದರೆ ಇವರಿಗೆ ಶಾಸಕರು ಬೇರೆ ಪಕ್ಷಕ್ಕೆ ಹೋಗುವ ಭಯ. ಆದ್ದರಿಂದ ಅವರನ್ನು ಸಹ ಟ್ರಿಪ್ ಕರೆದುಕೊಂಡು ಹೋಗುತ್ತಿದ್ದಾರೆ ಎಂದು ಕಿಡಿಕಾರಿದ್ದಾರೆ.
ರಾಜ್ಯ ಕಾಂಗ್ರೆಸ್ ಸರ್ಕಾರ ದೆಹಲಿಗೆ ತೆರಳುತ್ತಿದೆ. ಮಹಾತ್ಮ ಗಾಂಧಿ ಪೋಟೋ ಹಾಗೂ ಅದರ ಪಕ್ಕದಲ್ಲಿ ಸಿದ್ದರಾಮಯ್ಯ, ಡಿಕೆಶಿ ಪೋಟೋ ಹಾಕಿಕೊಂಡು ಹೋರಾಟಕ್ಕೆ ತೆರಳುತ್ತಿದ್ದಾರೆ. ಕಾಂಗ್ರೆಸ್ ಪ್ರತಿಭಟನೆ ಹಮ್ಮಿಕೊಂಡಿರುವುದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಸರ್ಕಾರದ ವತಿಯಿಂದ ಯಾಕೆ ಪ್ರತಿಭಟನೆ ಮಾಡುತ್ತಿರುವುದು? ಸರ್ಕಾರದ ಹಣವನ್ನು ಖರ್ಚು ಮಾಡುವುದಕ್ಕಾ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸರ್ಕಾರದ ಹಣವನ್ನು ಖರ್ಚು ಮಾಡಲು ದೆಹಲಿಗೆ ಹೋಗುತ್ತಿದ್ದು, ದೆಹಲಿಗೆ ಹೋಗಿ ಬರುವ ಖರ್ಚು, ಊಟ ಮತ್ತು ತಿಂಡಿಗೆ ಸರ್ಕಾರದ ಹಣವನ್ನೇ ಬಳಸಿಕೊಳ್ಳುತ್ತಾರೆ. ಅವರು ಸರ್ಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇದು ಲೋಕಸಭಾ ಚುನಾವಣಾ ಪ್ರಚಾರಕ್ಕೆ ಮಾಡುತ್ತಿರುವ ಕುತಂತ್ರವಾಗಿದೆ ಎಂದು ಹೇಳಿದ್ದಾರೆ.