ಭೋಪಾಲ್, ಫೆ 06 (DaijiworldNews/MS): ಮಧ್ಯ ಪ್ರದೇಶದ ಹರ್ದಾ ಜಿಲ್ಲೆಯ ಅಕ್ರಮ ಪಟಾಕಿ ತಯಾರಿಕೆ ಕಾರ್ಖಾನೆಯಲ್ಲಿ ಸ್ಫೋಟ ದುರಂತದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆಯಾಗಿದ್ದು ಸುಮಾರು 50 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಹರ್ದದ ಬೈರಾಗರ್ ಗ್ರಾಮದ ಮಗರ್ಧ ರಸ್ತೆಯಲ್ಲಿರುವ ಕಾರ್ಖಾನೆಯಲ್ಲಿ ಸಂಭವಿಸಿದ ಸ್ಫೋಟವು ಎಷ್ಟು ತೀವ್ರವಾಗಿದೆಯೆಂದರೆ, ಅದರ ಪರಿಣಾಮವು 15 ಕಿಲೋಮೀಟರ್ ವ್ಯಾಪ್ತಿಯನ್ನು ವ್ಯಾಪಿಸಿದೆ.
ಇಂದು ಮಧ್ಯಾ ಹ್ನ 12 ಗಂಟೆ ಸುಮಾರಿಗೆ ಅವಘಡ ಸಂಭವಿಸಿದೆ. ಗಾಯಾಳುಗಳನ್ನು ಸ್ಥಳೀಯ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಘಟನಾ ಸ್ಥಳಕ್ಕೆ ಇಂದೋರ್ ಮತ್ತು ಭೋಪಾಲ್ ನಿಂದ ಅಗ್ನಿ ಶಾಮಕ ದಳದ ಸಿಬ್ಬಂದಿ ಧಾವಿಸಿದ್ದು , ಬೆಂಕಿ ನಂದಿಸಲು ಕಾರ್ಯಾಚರಣೆ ನಡೆಸುತ್ತಿದ್ದಾರೆ.
"ಸ್ಫೋಟದ ಪರಿಣಾಮ ಗಾಜಿನ ಕಿಟಕಿಗಳು ಒಡೆದು ಇದರಿಂದ ಕಾಲ್ತುಳಿತಕ್ಕೆ ಕಾರಣವಾಗಿದ್ದು, ಇವರೆಲ್ಲರೂ ಕಾಲ್ತುಳಿತದಿಂದ ಮೃತಪಟ್ಟಿದ್ದಾರೆ. ಬೆಂಕಿಯ ತೀವ್ರತೆ ಇನ್ನು ತಹಬದಿಗೆ ಬಂದಿಲ್ಲ, ಹೀಗಾಗಿ ನಮಗೆ ಇನ್ನೂ ನಿಜವಾದ ಸ್ಫೋಟದ ಸ್ಥಳಕ್ಕೆ ತಲುಪಲಾಗಲಿಲ್ಲ, ರಕ್ಷಣಾ ಕಾರ್ಯಾಚರಣೆ ಇನ್ನೂ ನಡೆಯುತ್ತಿದೆ"ಎಂದು ಹರ್ದಾ ಕೊತ್ವಾಲಿ ಪೊಲೀಸ್ ಠಾಣೆಯ ಪ್ರಭಾರಿ ಅಬ್ದುಲ್ ರಯೀಸ್ ಖಾನ್ ಹೇಳಿದ್ದಾರೆ.
ಮಧ್ಯಪ್ರದೇಶ ಮುಖ್ಯಮಂತ್ರಿ ಮೋಹನ್ ಯಾದವ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, "ಸ್ಥಳಕ್ಕೆ 50 ಕ್ಕೂ ಹೆಚ್ಚು ಆಂಬ್ಯುಲೆನ್ಸ್ಗಳನ್ನು ಕಳುಹಿಸಲಾಗಿದ್ದು, ಮೃತರ ಹಾಗೂ ಗಾಯಾಳು ಕುಟುಂಬಗಳಿಗೆ 4 ಲಕ್ಷ ರೂಪಾಯಿ ಪರಿಹಾರವನ್ನು ಘೋಷಿಸಲಾಗಿದೆ" ಎಂದು ತಿಳಿಸಿದ್ದಾರೆ.