ಬೆಂಗಳೂರು, ಫೆ 05 (DaijiworldNews/ AK):ತೆರಿಗೆ ರೂಪದಲ್ಲಿ ಕರ್ನಾಟಕದಿಂದ ಹಣ ಸಂಗ್ರಹವಾದರೂ ಮೋದಿ ಸರ್ಕಾರ ರಾಜ್ಯಕ್ಕೆ ಅನ್ಯಾಯ ಮಾಡಿದೆ ಹಣ ನೀಡುತ್ತಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಸುದ್ದಿಗೋಷ್ಠಿ ನಡಸಿ ಆರೋಪಿದ ಬೆನ್ನಲ್ಲೇ ಇದೀಗ ರಾಜ್ಯ ಬಿಜೆಪಿ ತಿರುಗೇಟು ನೀಡಿದೆ.
ಯುಪಿಎ ಮತ್ತು ಎನ್ಡಿಎ ಸರ್ಕಾರದ ಅವಧಿಯಲ್ಲಿ ಕರ್ನಾಟಕ್ಕೆ ಎಷ್ಟು ಹಣ ಬಂದಿದೆ? ಎಷ್ಟು ರಸ್ತೆ ಅಭಿವೃದ್ಧಿಯಾಗಿದೆ? ರೈಲ್ವೆ ಯೋಜನೆಗಳಿಗೆ ಎಷ್ಟು ಹಣ ನೀಡಿದೆ ಎಂಬುದರ ಬಗ್ಗೆ ಸಂಖ್ಯಾ ಮಾಹಿತಿಗಳಿರುವ ಪೋಸ್ಟ್ ಬಿಡುಗಡೆ ಮಾಡಿ ಆಕ್ರೋಶ ವ್ಯಕ್ತಪಡಿಸಿದೆ
ತಮ್ಮ ಆಡಳಿತದ ದಯನೀಯ ವೈಫಲ್ಯವನ್ನು ಮರೆಮಾಚಿಕೊಳ್ಳಲು ಸಿಎಂ ಸಿದ್ದರಾಮಯ್ಯ ಅವರು ಸದಾ ಆರೋಪಿಸುವುದು ಕೇಂದ್ರ ಸರ್ಕಾರವನ್ನು. ಕರ್ನಾಟಕದ ಇತಿಹಾಸದಲ್ಲಿಯೇ ಹಿಂದೆಂದೂ ಕಂಡು ಕೇಳರಿಯದಂತಹ ಆಡಳಿತ ವಿರೋಧಿ ಅಲೆ ಸದ್ಯ ಕಾಂಗ್ರೆಸ್ ಸರ್ಕಾರಕ್ಕಿದೆ. ಆಡಳಿತ ವಿರೋಧಿ ಅಲೆಯಿಂದ ಜನರ ಗಮನವನ್ನು ಬೇರೆಡೆ ಸೆಳೆಯಲು ಕಾಂಗ್ರೆಸ್ ಮತ್ತು ಸಿಎಂ ಸಿದ್ದರಾಮಯ್ಯನವರು ಕೇಂದ್ರ ಸರ್ಕಾರದ ಮೇಲೆ ಗೂಬೆ ಕೂರಿಸುವ ವ್ಯರ್ಥ ಪ್ರಯತ್ನ ಮಾಡುತ್ತಿದ್ದಾರೆ.
ಜೀವನ ಪೂರ್ತಿ ಪರರನ್ನು ಬೊಟ್ಟು ಮಾಡಿ ಜಾರಿಕೊಳ್ಳಲು ಯತ್ನಿಸುತ್ತಿರುವ ಸಿದ್ದರಾಮಯ್ಯ ನವರೇ, ಈ ಕೆಳಗಿನ ಮಾಹಿತಿ ನಿಮ್ಮ ಸರ್ಕಾರದ ಬಳಿ ಇಲ್ಲದಿರುವುದು ನಿಮ್ಮ ಆಡಳಿತದ ಅಸಾಮರ್ಥ್ಯ ತೋರಿಸುತ್ತದಷ್ಟೆ. ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನೀಡಿದ್ದಕ್ಕಿಂತ ಮೂರುಪಟ್ಟು ಅಧಿಕ ತೆರಿಗೆಪಾಲು ಮತ್ತು ಅನುದಾನಗಳನ್ನು ನೀಡಿದ್ದು ನರೇಂದ್ರ ಮೋದಿ ಸರ್ಕಾರ.
2004-2014ರ ವರೆಗೆ ಯುಪಿಎ ಅಧಿಕಾರದಲ್ಲಿದ್ದಾಗ ಕಲ್ಲಿದ್ದಲು ಹಗರಣ, 2ಜಿ ಹಗರಣ, ಕಾಮನ್ವೆಲ್ತ್ ಹಗರಣಗಳಂಥ ಭಾನಗಡಿಗಳ ನಡುವೆ ಕರ್ನಾಟಕಕ್ಕೆ ನೀಡಲು ಅಂದಿನ ಕೇಂದ್ರ ಸರ್ಕಾರದ ಬಳಿ ಇದ್ದದ್ದೇ 81,795 ಕೋಟಿ ರೂ. ಇದಕ್ಕೆ ಹೋಲಿಸಿದರೆ ಮೋದಿ ಸರ್ಕಾರ ನೀಡಿರುವ 2,82,791 ಕೋಟಿ ರೂ. ಶೇ.245 ರಷ್ಟು ಹೆಚ್ಚು ಎಂಬುದನ್ನು ಕಾಂಗ್ರೆಸ್ ಯಾವತ್ತೂ ಮರೆಮಾಚಲು ಸಾಧ್ಯವಿಲ್ಲ. ಕರ್ನಾಟಕದ ಅಭಿವೃದ್ಧಿಗೆ ಈಗ ಹಿಂದೆಂದಿಗಿಂತಲೂ ಹೆಚ್ಚು ಸಿಕ್ಕಿದೆ ಎಂಬುದನ್ನು ತಿರುಚಲು ನೀವು ಎಷ್ಟೇ ಪ್ರಯತ್ನಿಸಿದರೂ ಅಸಾಧ್ಯ ಎಂದು ಲೆಕ್ಕಚಾರದ ದಾಖಲೆ ಬಿಡುಗಡೆ ಮಾಡುವ ಮೂಲಕ ಕಾಂಗ್ರೆಸ್ಗೆ ತಿರುಗೇಟು ಕೊಟ್ಟಿದ್ದಾರೆ.