ಜಾರ್ಖಂಡ್, ಫೆ 05 (DaijiworldNews/MS): ಜಾರ್ಖಂಡ್ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಚಂಪೈ ಸೊರೆನ್ ವಿಶ್ವಾಸಮತ ಸಾಬೀತುಪಡಿಸಿದ್ದಾರೆ. 81 ಸದಸ್ಯ ಬಲದ ಜಾರ್ಖಂಡ್ ವಿಧಾನಸಭೆಯಲ್ಲಿ ಬಹುಮತಕ್ಕೆ ಬೇಕಾದ ಸಂಖ್ಯೆ 41 ಆಗಿತ್ತು. ಚಂಪೈ ಸೊರೆನ್ 47 ಮತಗಳೊಂದಿಗೆ ಬಹುಮತ ಪಡೆದಿದ್ದಾರೆ.
ಬಿಜೆಪಿ ಶಾಸಕರನ್ನು ಖರೀದಿಸಬಹುದು ಎಂಬ ಆತಂಕದಿಂದ ಫೆಬ್ರವರಿ 2 ರಂದು ಹೈದರಾಬಾದ್ಗೆ ತೆರಳಿದ್ದ ಜೆಎಂಎಂ ನೇತೃತ್ವದ ಮೈತ್ರಿಕೂಟದ 40 ಶಾಸಕರು ವಿಶ್ವಾಸಮತ ಯಾಚನೆ ಕಾರಣ ಭಾನುವಾರವಂದು ರಾಂಚಿಗೆ ಬಂದಿದ್ದರು.
ಬಿಜೆಪಿ 25 ಶಾಸಕರನ್ನು ಹೊಂದಿದ್ದು, AJSU ಅಥವಾ ಆಲ್ ಜಾರ್ಖಂಡ್ ವಿದ್ಯಾರ್ಥಿ ಒಕ್ಕೂಟವು ಮೂವರನ್ನು ಹೊಂದಿದೆ. ಎನ್ಸಿಪಿ ಮತ್ತು ಎಡಪಕ್ಷಗಳು ತಲಾ ಒಬ್ಬರನ್ನು ಹೊಂದಿದ್ದು, ಮೂವರು ಸ್ವತಂತ್ರ ಶಾಸಕರಿದ್ದಾರೆ.
ಹೇಮಂತ್ ಸೊರೆನ್ ಅವರು ತಮ್ಮ ಬಂಧನಕ್ಕೂ ಮುನ್ನ ಮುಖ್ಯಮಂತ್ರಿ ಹುದ್ದೆಗೆ ಜನವರಿ 31ರಂದು ರಾಜೀನಾಮೆ ನೀಡಿದ್ದರು. ಫೆಬ್ರವರಿ 2 ರಂದು ಚಂಪೈ ಸೊರೆನ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.