ರಾಂಚಿ, ಫೆ 05 (DaijiworldNews/MS): ಬಂಧಿತ ಜೆಎಂಎಂ ನಾಯಕ, ಜಾರ್ಖಂಡ್ ಮಾಜಿ ಮುಖ್ಯಮಂತ್ರಿ ಹೇಮಂತ್ ಸೊರೆನ್ ಇಂದು ಬಿಗಿ ಭದ್ರತೆಯ ನಡುವೆ ವಿಧಾನಸಭೆಗೆ ಆಗಮಿಸಿ ಚಂಪೈ ಸೊರೆನ್ ನೇತೃತ್ವದ ಸರ್ಕಾರದ ವಿಶ್ವಾಸ ಮತಯಾಚನೆಯಲ್ಲಿ ಭಾಗವಹಿಸಿದ್ದಾರೆ.
ರಾಂಚಿಯ ವಿಶೇಷ ನ್ಯಾಯಾಲಯವು ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಕಾರ್ಯಕಾರಿ ಅಧ್ಯಕ್ಷ ಹೇಮಂತ್ ಸೊರೆನ್ ಅವರಿಗೆ ಸದನದಲ್ಲಿ ಪಾಲ್ಗೊಳ್ಳಲು ಅನುಮತಿ ನೀಡಿತ್ತು.
ಅಸೆಂಬ್ಲಿಯನ್ನುದ್ದೇಶಿಸಿ ಮಾತನಾಡಿದ ಸೋರೆನ್, ತನ್ನ ಬಂಧನದಲ್ಲಿ ರಾಜಭವನದ ಪಾತ್ರವೂ ಇದೆ ಎಂದು ಆರೋಪಿಸಿದ್ದಾರೆ
"ಜನವರಿ 31 ರ ರಾತ್ರಿ, ದೇಶದಲ್ಲಿ ಮೊದಲ ಬಾರಿಗೆ ಮುಖ್ಯಮಂತ್ರಿಯನ್ನು ಬಂಧಿಸಲಾಯಿತು ಮತ್ತು ಈ ಘಟನೆಯಲ್ಲಿ ರಾಜಭವನವೂ ಭಾಗಿಯಾಗಿದೆ. ಭಾರತದ ಇತಿಹಾಸದಲ್ಲಿ ಆ ದಿನ ಕಪ್ಪು ಅಧ್ಯಾಯವಾಗಿ ನೆನಪಿನಲ್ಲಿ ಉಳಿಯುತ್ತದೆ" ಎಂದು ಸೋರೆನ್ ಹೇಳಿದ್ದಾರೆ.
ಇದೇ ವೇಳೆ ತಮ್ಮ ವಿರುದ್ಧ ಭ್ರಷ್ಟಾಚಾರ ಆರೋಪ ಸಾಬೀತಾದರೆ ರಾಜಕೀಯ ತ್ಯಜಿಸುವುದಾಗಿ ಸೋರೆನ್ ಹೇಳಿದ್ದಾರೆ.
ಭೂ ಹಗರಣಕ್ಕೆ ಸಂಬಂಧಿಸಿದ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಹೇಮಂತ್ ಸೋರೆನ್ ಅವರನ್ನು ಜಾರಿ ನಿರ್ದೇಶನಾಲಯವು ಜನವರಿ 31 ರಂದು ಬಂಧಿಸಿತ್ತು. ಫೆಬ್ರವರಿ 2 ರಂದು ನ್ಯಾಯಾಲಯ ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿತ್ತು.ಹೇಮಂತ್ ಸೊರೆನ್ ಅವರು ವಿಶೇಷ ಪಿಎಂಎಲ್ಎ (ಹಣ ಲಾಂಡರಿಂಗ್ ತಡೆ ಕಾಯ್ದೆ) ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದು, ಹೊಸ ಸರ್ಕಾರ ಕೋರಿರುವ ವಿಶ್ವಾಸ ಮತದಲ್ಲಿ ಭಾಗವಹಿಸಲು ಅನುಮತಿ ನೀಡುವಂತೆ ಕೋರಿದ್ದರು.