ನವದೆಹಲಿ, ಫೆ 05 (DaijiworldNews/PC): ತಾಯಿ ತನ್ನ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ಅಸೂಯೆಯಿಂದ, ಹಾಗೂ ಸಾಲ ತೀರಿಸಲು ಸ್ವಂತ ಮನೆಯಲ್ಲೇ ತಂಗಿಯ ಮದುವೆಗೆಂದು ತೆಗೆದಿಟ್ಟಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿದ ಘಟನೆ ನವದೆಹಲಿಯಲ್ಲಿ ನಡೆದಿದೆ.
ಜ. 30 ರಂದು ಘಟನೆ ನಡೆದಿದ್ದು, ಶ್ವೇತಾ ತನ್ನ ಮನೆಯಲ್ಲಿದ್ದ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ 25 ಸಾವಿರ ನಗದು ಕಳ್ಳತನ ಮಾಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ನವದೆಹಲಿಯ ಮೋಹನನಗರ ಬಡಾವಣೆಯಲ್ಲಿರುವ ಸ್ವಂತ ಮನೆಯಲ್ಲೇ ಶ್ವೇತಾ ಕಳ್ಳತನ ಮಾಡಿದ್ದಾಳೆ. ಶ್ವೇತಾ ಬುರ್ಖಾ ಧರಿಸಿ ಈ ಕೃತ್ಯ ಎಸಗಿದ್ದು, ಆಕೆಯ ಕುಟುಂಬಸ್ಥರು ಅವಳನ್ನು ಗುರುತಿಸಲು ಸಾಧ್ಯವಿಲ್ಲ ಎಂದು ತಿಳಿದಿದ್ದಳು.
ಮನೆಯ ಮುಖ್ಯ ಬಾಗಿಲು ಮತ್ತು ಬೀಗ ಯಥಾಸ್ಥಿತಿಯಲ್ಲಿವೆ ಆದ್ದರಿಂದ ಮನೆಯಲ್ಲಿ ಬಲವಂತವಾಗಿ ಪ್ರವೇಶಿಸಿದ ಯಾವುದೇ ಲಕ್ಷಣಗಳು ಕಂಡುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಶ್ವೇತಾ ತನ್ನ ತಾಯಿ ತನ್ನ ತಂಗಿಯನ್ನು ಹೆಚ್ಚು ಪ್ರೀತಿಸುತ್ತಿದ್ದರಿಂದ ದರೋಡೆ ನಡೆಸಿದ್ದೇನೆ ಎಂದು ಹೇಳಿದ್ದಾಳೆ. ತನಗೆ ಹಣದ ಅವಶ್ಯಕತೆ ಇದ್ದುದ್ದರಿಂದ ಈ ದರೋಡೆಗೆ ಯೋಜನೆ ರೂಪಿಸಿದೆ ಎಂದಿದ್ದಾರೆ.
ದರೋಡೆಯ ದಿನದಂದು, ಶ್ವೇತಾ ತನ್ನ ತಾಯಿಯ ಬಳಿ ಕೀಗಳನ್ನು ತೆಗೆದುಕೊಂಡಿದ್ದಳು. ಪ್ರವೇಶ ಪಡೆಯುವ ಮೊದಲು ಸಾರ್ವಜನಿಕ ಶೌಚಾಲಯದಲ್ಲಿ ಬುರ್ಖಾವನ್ನು ಧರಿಸಿದ್ದರು ಬಳಿಕ ಮನೆಗೆ ಬಂದು ಒಡವೆಗಳನ್ನು ಕದ್ದು ಪರಾರಿಯಾಗಿದ್ದಳು.
ಶ್ವೇತಾ ಕೆಲವು ಆಭರಣಗಳನ್ನು ಕದ್ದು, ಮಾರಾಟ ಮಾಡಿರುವುದಾಗಿ ಒಪ್ಪಿಕೊಂಡಿದ್ದು ಪೊಲೀಸರು ಕದ್ದ ಒಡವೆಗಳನ್ನು ವಶಪಡಿಸಿಕೊಂಡು ಆಕೆಯನ್ನು ಬಂಧಿಸಿದ್ದಾರೆ.