ಬೆಂಗಳೂರು, ಫೆ 3(DaijiworldNews/SK): ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ಮಾತನಾಡಿದರೆ ಅದನ್ನು ಬಿಜೆಪಿಯವರು ತಿರುಚಿ ರಾಜಕಾರಣದ ರೂಪ ನೀಡುತ್ತಿದ್ದಾರೆ. ನಮ್ಮ ರಾಜ್ಯದ ಹಿತ ಕಾಯಲು ನಾನು ಹಿಂದೇಟು ಹಾಕುವ ಪ್ರಶ್ನೆಯೇ ಇಲ್ಲ ಎಂದು ಸಂಸದ ಡಿಕೆ ಸುರೇಶ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಬನ್ನೇರುಘಟ್ಟದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಕೆ ಸುರೇಶ್ ಅವರು, ಕನ್ನಡಿಗರಿಗೆ ಅನ್ಯಾಯ ಆಗಿದೆ ಎಂದು ನಾನು ಮಾತನಾಡಿದ್ದೆ. ಉತ್ತರ ಪ್ರದೇಶಕ್ಕೆ 33% ರಷ್ಟು ಹಣವನ್ನು ನೀಡುತ್ತಿದ್ದಾರೆ. ನಮ್ಮ ರಾಜ್ಯಕ್ಕೆ ತೆರಿಗೆಯ ಹಣವನ್ನು ವಾಪಸ್ ಕೊಡಿ ಎಂದು ಪ್ರಶ್ನೆ ಮಾಡಿದ್ದು ಹೇಗೆ ತಪ್ಪಾಗುತ್ತದೆ? ರಾಜ್ಯದಲ್ಲಿ ಬರಗಾಲ ತಾಂಡವ ಆಡುತ್ತಿದ್ದು, 224 ತಾಲೂಕು ಬರಗಾಲ ಪೀಡಿತ ತಾಲೂಕು ಎಂದು ಘೋಷಣೆ ಆಗಿದೆ. ಆದರೂ ಸಹ ರಾಜ್ಯಕ್ಕೆ ಅನ್ಯಾಯ ಆಗುತ್ತಿದೆ.
ನ್ಯಾಯಕ್ಕಾಗಿ ಹೋರಾಡಿದ ನನ್ನ ವಿರುದ್ಧ ಯಾವುದೇ ಠಾಣೆಯಲ್ಲಿ ಬೇಕಾದರೂ ದೂರನ್ನು ನೀಡಲಿ. ನಾನು ಹೋರಾಟ ಮಾಡಲು ಸಿದ್ಧನಿದ್ದೇನೆ ಎಂದು ಸವಾಲು ಹಾಕಿದರು.
ದಕ್ಷಿಣ ಭಾರತದ ಜನರ ಪರ ನಾನು ಮಾತನಾಡಿದ್ದೇನೆ. ಇದನ್ನು ತಪ್ಪು ಎನ್ನುವ ಬಿಜೆಪಿಯವರು ಡೋಂಗಿ ಹಿಂದುತ್ವವಾದಿಗಳು. ಡೋಂಗಿ ಹಿಂದುತ್ವ ಇಟ್ಟುಕೊಂಡು ರಾಜಕಾರಣ ಮಾಡುತ್ತಿದ್ದೀರಿ.
ಇನ್ನು ಬಜೆಟ್ನಲ್ಲಿ ನಿಮಗೆ ದೇಶಕ್ಕೋಸ್ಕರ ಏನನ್ನೂ ಕೊಡಲು ಸಾಧ್ಯ ಆಗಿಲ್ಲ. ಇದನ್ನು ಮುಚ್ಚಿಹಾಕಲು ನನ್ನ ಹೇಳಿಕೆಯನ್ನು ತಿರುಚಿ ರಾಜಕಾರಣ ಮಾಡಲಾಗುತ್ತಿದೆ ಎಂದು ಕಿಡಿಕಾರಿದರು.