ರಾಮನಗರ, ಫೆ 3(DaijiworldNews/SK): ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸೋತರೆ ಗ್ಯಾರಂಟಿ ಯೋಜನೆ ರದ್ದು ಆಗಲಿದೆ ಎಂದು ಶಾಸಕ ಬಾಲಕೃಷ್ಣ ಹೇಳಿಕೆ ವಿರುದ್ಧ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರು ಚುನಾವಣೆ ಆಯೋಗಕ್ಕೆ ದೂರು ನೀಡಿದ್ದಾರೆ. ಇದೀಗ ಈ ವಿಚಾರವಾಗಿ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಕಿಡಿಕಾರಿದ್ದಾರೆ.
ರಾಮನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮಾಗಡಿ ಶಾಸಕ ಹೆಚ್.ಸಿ.ಬಾಲಕೃಷ್ಣ ಅವರು, ನಾವು ಹೇಳಿರೋದು ಜನರಿಗೆ ಗ್ಯಾರಂಟಿ ಬೇಕಾ ಅಥವಾ ಅಕ್ಷತೆ ಬೇಕಾ ಎಂದು. ನಾವು ಯಾರನ್ನು ಬ್ಲ್ಯಾಕ್ ಮೇಲ್ ಮಾಡ್ತಾ ಇದೀವಿ ಹೇಳಿ? ನಮಗೆ ಮತ ಹಾಕಿಲ್ಲ ಅಂತ ಹೇಳಿ ಯಾರನ್ನಾದರು ಅಟ್ಟಾಡಿಸಿಕೊಂಡು ಹೋಗ್ತಾ ಇದೀವಾ ಎಂದು ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಜೆಡಿಎಸ್ ಅವರಿಗೆ ನಾನು ಎಂಎಲ್ಎ ಆಗಿರೋದನ್ನು ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಈ ಕಾರಣಕ್ಕೆ ನನ್ನ ವಿರುದ್ಧ ದೂರು ಕೊಟ್ಟಿದ್ದಾರೆ. ಬೇಕಾದರೇ ಕಾನೂನು ರೀತಿ ಪರಿಶೀಲನೆ ಮಾಡಲಿ. ಆಗ ಸತ್ಯತೆ ಹೊರಗೆ ಬರಲಿ. ನಾವು ಅಧಿಕಾರದಲ್ಲಿ ಇರೋದನ್ನು ಅವರ ಕುಟುಂಬ ಸಹಿಸುತ್ತಿಲ್ಲ. ಅವರಿಗೆ ದೇವರು ಒಳ್ಳೆಯದು ಮಾಡಲಿ ಎಂದು ನಿಖಿಲ್ ಕುಮಾರಸ್ವಾಮಿಗೆ ತಿರುಗೇಟು ನೀಡಿದ್ದಾರೆ.