ವಿಜಯಪುರ, ಫೆ 02 (DaijiworldNews/HR): ಹಿಂದಿನ ಬಿಜೆಪಿ ಸರ್ಕಾರ ಸಾಲ ಹೊರಿಸಿ ಹೋಗಿದ್ದರೂ ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಚುನಾವಣೆ ಸಂದರ್ಭದಲ್ಲಿ ನೀಡಿದ್ದ ಐದೂ ಗ್ಯಾರಂಟಿ ಯೋಜನೆಗಳನ್ನು ಜಾರಿಗೊಳಿಸಿ ಯಶಸ್ವಿಯಾಗಿವೆ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತು ಮಾತನಾಡಿದ ಅವರು, ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಮೊದಲ ಸರ್ಕಾರದ ಅವಧಿಯಲ್ಲೇ ರಾಜ್ಯದ ಎಲ್ಲಾ ಸರ್ಕಾರಿ ಕಛೇರಿಗಳಲ್ಲಿ ಬಸವೇಶ್ವರ ಫೋಟೋ ಅಳವಡಿಸಲು ಕ್ರಮ ಕೈಗೊಂಡಿದ್ದು, ವಿಜಯಪುರದಲ್ಲಿ ಇರುವ ಮಹಿಳಾ ವಿಶ್ವವಿದ್ಯಾಲಯಕ್ಕೆ ಅಕ್ಕಮಹಾದೇವಿ ಹೆಸರು ನಾಮಕರಣ ಮಾಡಿದೆ. ಇದೀಗ ಬಸವೇಶ್ವರರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಿಸಲಾಗಿದೆ ಎಂದರು.
ಇನ್ನು ಕೃಷ್ಣಾ ಮೇಲ್ದಂಡೆ ಯೋಜನೆ ಮೂರನೇ ಹಂತದ ಯೋಜನೆಗಳ ಅನುಷ್ಠಾನಕ್ಕೆ ನ್ಯಾಯಾಲಯದಲ್ಲಿ ನೆರೆಯ ರಾಜ್ಯಗಳು ದಾಖಲಿಸಿರುವ ತ್ಯಾಜ್ಯದಿಂದ ಕೃಷ್ಣಾ ಭಾಗ್ಯ ಜಲ ನಿಗಮದಿಂದ ಯೋಜನೆಗಳ ಅನುಷ್ಠಾನಕ್ಕೆ ಸಮಸ್ಯೆಯಾಗಿದ್ದು, ಸಿದ್ಧರಾಮಯ್ಯ ಅದನ್ನು ಸುಲಭವಾಗಿ ನಿಭಾಯಿಸುವ ಕೆಲಸ ಮಾಡಲಿದ್ದಾರೆ ಎಂದು ಹೇಳಿದ್ದಾರೆ.