ಬೆಂಗಳೂರು, ಫೆ 01 (DaijiworldNews/HR): ಬಡವರ ಪರವಾದ, ಅಭಿವೃದ್ಧಿಗೆ ಪೂರಕವಾದ ಬಜೆಟ್ ಅನ್ನು ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು.
ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ತಂತ್ರಜ್ಞಾನ ಬೆಳೆಯಲು ಪೂರಕವಾದ ಬಜೆಟ್ ಇದು. ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ಘೋಷಣೆಯಂತೆ ಈ ಬಜೆಟ್ ಇದೆ. ಲೋಕಸಭಾ ಚುನಾವಣೆ ಹತ್ತಿರದಲ್ಲಿದ್ದರೂ ಸಹ ಯಾವುದೇ ಓಟಿಗಾಗಿ ಯಾವುದೇ ಹೊಸ ಘೊಷಣೆ ಮಾಡದೇ ದೇಶದ ಅಭಿವೃದ್ಧಿಗೆ ಬೇಕಾದ ಅಗತ್ಯ ಬಜೆಟ್ ಮಂಡನೆ ಮಾಡಿದ್ದಾರೆ ಎಂದು ವಿಶ್ಲೇಷಿಸಿದರು.
ಬಡವರ, ಮಧ್ಯಮ ವರ್ಗದವರ ಏಳ್ಗೆ ಆಧಾರವಾಗಿಟ್ಟುಕೊಂಡು ಕೆಲಸ ಮಾಡಿದ್ದಾರೆ. ಮಧ್ಯಮ ವರ್ಗಕ್ಕೆ ಅನುಕೂಲವಾದ ಬಜೆಟ್ ಇದು. 9 ಕೋಟಿ ಮಹಿಳೆಯರಿಗೆ ಅನುಕೂಲವಾಗುವಂತ ಸೋಲಾರ್ ಯೋಜನೆ, ಗರ್ಭಕೋಶದ ಕ್ಯಾನ್ಸರ್ಗೆ ಉಚಿತ ಚಿಕಿತ್ಸೆ ನೀಡುವುದು, ಆಶಾ, ಅಂಗನವಾಡಿ ಕಾರ್ಯಕರ್ತೆಯರಿಗೆ ಆಯುಷ್ಮನ್ ಕಾರ್ಡ್, 9ರಿಂದ 15 ವರ್ಷದ ಮಕ್ಕಳಿಗೆ ಉಚಿತ ಲಸಿಕೆ, ವಂದೇ ಭಾರತ್ ರೈಲುಗಳಲ್ಲಿ ಕೋಚ್ ಹೆಚ್ಚಿಸಿರುವುದು, 517 ವಿಮಾನ ನಿಲ್ದಾಣ ನಿರ್ಮಾಣಕ್ಕೆ ಪೂರಕ ವಾತಾವರಣ ನಿರ್ಮಾಣ, ಲಕ್ಷದ್ವೀಪದ ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ವಿಶೇಷ ಅವಕಾಶ ನೀಡಲಾಗಿದೆ ಎಂದು ವಿವರಿಸಿದರು.
ಈ ಬಜೆಟ್ನಿಂದ ವಿಶ್ವ ಮಟ್ಟದಲ್ಲಿ ಭಾರತದ ಆರ್ಥಿಕತೆ ಬೆಳವಣಿಗೆ ಆಗಲಿದೆ. ಇದೊಂದು ಆಶಾದಾಯಕ ಬಜೆಟ್ ಆಗಿದೆ. ಕೇಂದ್ರ ಸರ್ಕಾರ ಯಾವುದೇ ರೀತಿಯಿಂದ ಗಿಮಿಕ್ ಮಾಡುವ ರೀತಿ ನಡೆದುಕೊಂಡಿಲ್ಲ. ಮುಂದಿನ ಜನಾಂಗಕ್ಕೆ ಪೂರಕವಾಗಿದೆ. 2047ರ ಹೊತ್ತಿಗೆ ದೇಶ ಜಗತ್ತಿನ ದೊಡ್ಡ ಆರ್ಥಿಕ ಶಕ್ತಿಯಾಗಿ ಬೆಳೆಯಬೇಕು ಎಂಬ ಕನಸು ಮೋದಿಜೀಯವರಿಗೆ ಇದೆ. ಮುಂದಿನ 5 ವರ್ಷಗಳಲ್ಲಿ ವಿಶ್ವದ 3ನೇ ಆರ್ಥಿಕ ಶಕ್ತಿಯಾಗಿ ಭಾರತ ಬೆಳೆಯಲಿದೆ ಎಂದರು.