ಬೆಂಗಳೂರು, ಫೆ 01 (DaijiworldNews/HR): ಕರ್ನಾಟಕದಿಂದಲೇ ರಾಜ್ಯಸಭೆಗೆ ಹೋಗಿರುವ ನಿರ್ಮಲಾ ಸೀತಾರಾಮನ್ ಅವರು ಕರ್ನಾಟಕಕ್ಕೆ ನೀಡಿದ ಕೊಡುಗೆಯಾದರೂ ಏನು ಅಂತ ಯೋಚಿಸಬೇಕಾದ ಅವಶ್ಯಕತೆಯಿದೆ. ಅವರಿಂದ ಕರ್ನಾಟಕಕ್ಕೆ ಏನೂ ಪ್ರಯೋಜನವಿಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಮಧ್ಯಂತರ ಬಜೆಟ್ 2024ರ ಕುರಿತು ಪ್ರತಿಕ್ರಿಯೆ ನೀಡಿದ ಅವರು, ಕಳೆದ 10 ವರ್ಷಗಳಿಂದ ಕನ್ನಡಿಗರಿಗೆ ಕೇವಲ ಅನ್ಯಾಯವಾಗುತ್ತಿದೆ. ಕೇಂದ್ರ ಸರ್ಕಾರ ಉದ್ಯೋಗ ಸೃಷ್ಟಿ ಮಾಡುವ ಭರವಸೆ ನೀಡಿತ್ತು, ಅದರೆ ಅದು ಸಾಧ್ಯವಾಗಿಲ್ಲ ಎಂದರು.
ಇನ್ನು ಭಾರತದಲ್ಲಿ ನಿರುದ್ಯೋಗ ಸಮಸ್ಯೆ ಕಳೆದ 50 ವರ್ಷಗಳಲ್ಲಿ ಅತಿಹೆಚ್ಚು ಅಂತ ಹೇಳಲಾಗಿದೆ, ಯುದ್ಧಗ್ರಸ್ಥ ಇಸ್ರೇಲ್ ಗೆ ಉದ್ಯೋಗ ಅರಸಿಕೊಂಡು ನಮ್ಮ ದೇಶದ 10,000 ಯುವಕರು ಹೋಗುತ್ತಿದ್ದಾರೆಂದರೆ ನಿರುದ್ಯೋಗ ಸಮಸ್ಯೆ ಎಷ್ಟು ಗಂಭೀರವಾಗಿದೆ ಅನ್ನೋದು ಗೊತ್ತಾಗುತ್ತದೆ. ಸರ್ಕಾರ ಮಹಿಳಾ ಸಬಲೀಕರಣದ ಬಗ್ಗೆ ಮಾತಾಡುತ್ತದೆ, ರೈತರ ಆದಾಯ ದುಪ್ಪಟ್ಟು ಮಾಡೋದಾಗಿ ಹೇಳುತ್ತದೆ, ವಿದೇಶಿ ಬಂಡವಾಳ ಹೆಚ್ಚಿಸುವ ಬಗ್ಗೆ ಚರ್ಚೆಯಾಗುತ್ತದೆ, ಆದರೆ ವಾಸ್ತವದಲ್ಲಿ ಯಾವ ಯೋಜನೆಯೂ ಕರ್ನಾಟಕದಲ್ಲಿ ಜಾರಿಗೊಳ್ಳುವುದಿಲ್ಲ ಎಂದು ಹೇಳಿದ್ದಾರೆ.