ರಾಯಚೂರು, ಜ 31 (DaijiworldNews/AA): ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆ ನಡೆಸಲು ವಾರಾಣಸಿ ನ್ಯಾಯಾಲಯ ಅನುಮತಿ ನೀಡಿ ತೀರ್ಪು ನೀಡಿದೆ. ಈ ತೀರ್ಪಿನ ಮೂಲಕ ಕಾಶಿ ವಿಶ್ವನಾಥನನ್ನ ಬಿಜೆಪಿ ಕಾಶಿ ವಿಶ್ವನಾಥ ಅಂತ ಕರೆಯಬೇಡಿ ಎಂದು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
ರಾಯಚೂರಿನಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ರಾಮ ಮಂದಿರ ನಿರ್ಮಾಣದ ವೇಳೆ ಬಿಜೆಪಿ ರಾಮ ಎಂದು ಕೆಲ ಕಾಂಗ್ರೆಸ್ ನವರು ಹೇಳುತ್ತಿದ್ದರು. ಈ ತೀರ್ಪಿನಿಂದಾಗಿ ಬಿಜೆಪಿ ಕಾಶಿ ವಿಶ್ವನಾಥ ಎಂದು ಕರೆಯಬೇಡಿ. ಇಲ್ಲಿನ ಮುಸ್ಲಿಮರು ನಾವು ಸಹೋದರರು. ಕಾಂಗ್ರೆಸ್ ನವರು ಒಡೆದಾಳುವ ನೀತಿ ಅನುಸರಿಸುತ್ತಿದ್ದಾರೆ. ನಮ್ಮನ್ನ ಒಡೆಯಬೇಡಿ ಎಂದು ಹೇಳಿದರು.
ಔರಂಗಜೇಬನ ಕಾಲದಲ್ಲಿ ದೇವಸ್ಥಾನ ಒಡೆದು ಮಸೀದಿ ಕಟ್ಟಲಾಗಿತ್ತು. ನೆಲಮಾಳಿಗೆಯಲ್ಲಿ ಹಿಂದೂಗಳ 10 ಮೂರ್ತಿ ಸಿಕ್ಕಿದ್ದು, ಹಿಂದೂಗಳು ಪೂಜಿಸಲು ಕೋರ್ಟ್ ಅನುಮತಿ ನೀಡಿರುವುದು ಖುಷಿಯಾಗಿದೆ. ಜೈ ಶ್ರೀರಾಮ ಎಂದು ಕರೆಯುತ್ತಿದ್ದೆವು ಈ ತೀರ್ಪಿನಿಂದ ಈಗ ಹರಹರ ಮಹಾದೇವ ಎಂದು ಕರೆಯುತ್ತೇವೆ. ವಾರಣಾಸಿ ನ್ಯಾಯಾಲಯದ ತೀರ್ಪಿನಿಂದಾಗಿ ಎಲ್ಲರಿಗೂ ಸಂತೋಷವಾಗಿದೆ. ಅಲ್ಲಿನ ಮುಸ್ಲಿಮರು ಹೈಕೋರ್ಟ್ ಗೆ ಹೋಗ್ತೀವಿ ಎಂದು ಹೇಳುತ್ತಿದ್ದಾರೆ. ಅವರು ಎಲ್ಲಿಗೆ ಬೇಕಾದರೂ ಹೋಗಲಿ ಅಭ್ಯಂತರವಿಲ್ಲ. ಎಲ್ಲಾ ದಾಖಲೆಗಳು ನಮ್ಮ ಪರವಾಗಿದೆ ಎಂದರು.
ಇನ್ನು ಕಾಶಿ ವಿಶ್ವನಾಥ ದೇವಸ್ಥಾನದ ಪುನರ್ ನಿರ್ಮಾಣವಾಗಬೇಕು. ಇನ್ನೂ ಕೆಳಗಡೆ ಅರ್ಧ ಮಂದಿರವಿದೆ. ನೀವು ನಮ್ಮ ಗುಲಾಮರೆಂದು ತೋರಿಸುವ ಉದ್ದೇಶದಿಂದ ಮಂದಿರದ ಮೇಲೆ ಮಸೀದಿ ನಿರ್ಮಾಣ ಮಾಡಿದ್ದಾರೆ. ಕಾಶಿ ವಿಶ್ವನಾಥ ಟ್ರಸ್ಟ್ ನವರು ಮಂದಿರ ಪುನರ್ ನಿರ್ಮಿಸಲು ಮುಂದಾಗಬೇಕು ಅನ್ನೋದು ನಮ್ಮ ಅಪೇಕ್ಷೆ. ಇದನ್ನ ಯಾವುದೇ ಕಾರಣಕ್ಕೂ ರಾಜಕೀಯಕ್ಕೆ ಎಳೆಯಬೇಡಿ ಎಂದು ಅವರು ತಿಳಿಸಿದ್ದಾರೆ.
ಯಾವುದೇ ಕಾರಣಕ್ಕೂ ಹಿಂದೂ ಸಮಾಜವನ್ನು ಒಡೆಯಬೇಡಿ. ಮುಸ್ಲಿಮರಿಗೆ ಯಾವ ಅವಕಾಶ ಸಿಗಬೇಕು ಅನ್ನೋದನ್ನ ನ್ಯಾಯಾಲಯ ತೀರ್ಮಾನ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.