ಬೆಂಗಳೂರು, ಜ 31 (DaijiworldNews/AA): ಅಂಗಡಿ-ಮುಂಗಟ್ಟುಗಳ ನಾಮಫಲಕಗಳಲ್ಲಿ ಶೇ. 60ರಷ್ಟು ಕನ್ನಡ ಕಡ್ಡಾಯವೆಂಬ ಸುಗ್ರೀವಾಜ್ಞೆಯನ್ನು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ತಿರಸ್ಕಾರ ಮಾಡಿಲ್ಲವೆಂದು ರಾಜಭವನ ಸ್ಪಷ್ಟಪಡಿಸಿದೆ.
ಈ ಬಗ್ಗೆ ರಾಜ್ಯಪಾಲರ ವಿಶೇಷ ಕಾರ್ಯದರ್ಶಿ ಪ್ರಭುಶಂಕರ್ ಪ್ರಕಟಣೆ ಹೊರಡಿಸಿದ್ದು, ಅಧಿವೇಶನ ನಿಗದಿಯಾಗಿರುವ ಹಿನ್ನೆಲೆ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕಾರ ಮಾಡಲಾಗಿಲ್ಲ ಎಂದು ಸ್ಪಷ್ಟೀಕರಣ ನೀಡಿದ್ದಾರೆ. ಈ ಮೂಲಕ ಸೃಷ್ಟಿಯಾಗಿದ್ದ ಎಲ್ಲಾ ಗೊಂದಲಗಳಿಗೆ ತೆರೆ ಬಿದ್ದಂತಾಗಿದೆ.
ಇನ್ನು ಪ್ರಕಟಣೆಯಲ್ಲಿ "ಅಧಿವೇಶನ ನಿಗದಿಯಾದ ಹಿನ್ನೆಲೆ ಕನ್ನಡ ಕಡ್ಡಾಯ ಸುಗ್ರೀವಾಜ್ಞೆಯನ್ನು ತಿರಸ್ಕಾರ ಮಾಡಿಲ್ಲ. ವಿಧಾನಮಂಡಲ ಅಧಿವೇಶನವು ಫೆ. 12ರಿಂದ ನಿಗದಿಯಾಗಿದೆ. ಈ ಅಧಿವೇಶನದಲ್ಲೇ ಉಭಯ ಸದನಗಳಲ್ಲಿ ಮಸೂದೆಯನ್ನು ಮಂಡಿಸಿ ಅನುಮೋದನೆ ಪಡೆಯುವಂತೆ ಸರ್ಕಾರಕ್ಕೆ ರಾಜ್ಯಪಾಲರು ಸೂಚಿಸಿದ್ದು, ಸುಗ್ರೀವಾಜ್ಞೆಯನ್ನು ವಾಪಾಸ್ ಕಳಿಸಿದ್ದಾರೆ" ಎಂದು ತಿಳಿಸಲಾಗಿದೆ.