ಭೋಪಾಲ್, ಜ 31 (DaijiworldNews/MS): ತನ್ನ ಎಂಟು ವರ್ಷದ ಮಗಳ ಕತ್ತು ಕೊಯ್ದು, ಪೊದೆಗೆ ಎಸೆದು ಹತ್ಯೆ ಮಾಡಲು ಯತ್ನಿಸಿದ ಆರೋಪದ ಮೇಲೆ ತಂದೆಯನ್ನು ಬಂಧಿಸಲಾಗಿದೆ.
ಭೋಪಾಲ್ ನಲ್ಲಿ ಈ ಭೀಭತ್ಸ ಘಟನೆ ನಡೆದಿದ್ದು , ಬಾಲಕಿಯ ಸ್ಥಿತಿ ಗಂಭೀರವಾಗಿದ್ದು ಹಮೀಡಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ.ಬಾಲಕಿ ತಂದೆ ತೇಜ್ ಸಿಂಗ್ ಲೋಧಿಯನ್ನು ಬಂಧಿಸಲಾಗಿದೆ.
ಬಾಲಕಿ ಪ್ರೀತಿ, ತೇಜ್ ಸಿಂಗ್ ನ ಮೊದಲ ಹೆಂಡತಿಯ ಮಗಳಾಗಿದ್ದು, ತನ್ನ ಮೊದಲ ಹೆಂಡತಿಯ ನಿಧನ ನಂತರ ಆತ ಇನ್ನೊಬ್ಬಾಕೆಯನ್ನು ಎರಡನೇ ವಿವಾಹವಾಗಿದ್ದ. ಎರಡನೇ ಪತ್ನಿ ವಿಶೇಷ ಸಾಮರ್ಥ್ಯವಿರುವ ಗಂಡು ಮಗುವಿಗೆ ಜನ್ಮ ನೀಡಿದ್ದಳು. ಕೌಟುಂಬಿಕ ಪರಿಸ್ಥಿತಿಯಿಂದ ಮನನೊಂದ ತೇಜ್ ಸಿಂಗ್ ಮಗಳನ್ನು ಕೊಲ್ಲಲು ನಿರ್ಧರಿಸಿ ಈ ಕೃತ್ಯ ನಡೆಸಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಉಪ ಆಯುಕ್ತ ರಿಯಾಜ್ ಇಕ್ಬಾಲ್ ಹೇಳಿದ್ದಾರೆ.
ಸೋಮವಾರ ರಾತ್ರಿ 10 ಗಂಟೆಗೆ ಬಾಲಕಿಯನ್ನು ತನ್ನ ಸಹೋದರನ ಮನೆಗೆ ಕರೆದೊಯ್ಯುತ್ತಿರುವುದಾಗಿ ತಿಳಿಸಿ ಮನೆಯಿಂದ ದೂರ ಕರೆದುಕೊಂಡು ಹೋಗಿದ್ದ. ಅಲ್ಲಿ ಆಕೆಯ ಬಾಯಿಯನ್ನು ಬಿಗಿದು, ಕತ್ತು ಸೀಳಿ ಪೊದೆಗಳ ಬಳಿ ಎಸೆದು ಬಂದಿದ್ದ. ಆದರೆ ಬಾಲಕಿಗೆ ಪ್ರಜ್ಞೆ ಬಂದು ಕುತ್ತಿಗೆಯಿಂದ ರಕ್ತಸ್ರಾವಗುತ್ತಲೇ ರಸ್ತೆಗೆ ಬಂದಿದ್ದು, ದಾರಿಹೋಕರು ಪೊಲೀಸರಿಗೆ ಮಾಹಿತಿ ನೀಡಿದ್ದರು.