ಬೆಂಗಳೂರು,ಏ24(Daijiworld News/AZM): ಮಾಜಿ ಸಚಿವ ರಮೇಶ್ ಜಾರಕಿ ಹೊಳಿ ರಾಜೀನಾಮೆ ನೀಡುವುದಾಗಿ ಹೇಳಿದ್ದು ಈ ಹಿನ್ನಲೆ ಸಮ್ಮಿಶ್ರ ಸರಕಾರ ಕಾಂಗ್ರೆಸ್ ಜೆಡಿಎಸ್ ಶಾಸಕರ ಮೇಲೆ ತೀವ್ರಾ ನಿಗಾ ಇಡಲು ತೀರ್ಮಾನಿಸಿದೆ. ಹಾಗೂ ಈ ಕುರಿತು ಗುಪ್ತಚರ ಇಲಾಖೆಗೆ ಸೂಚನೆ ನೀಡಿದೆ.
ಬಿಜೆಪಿ ನಾಯಕರು ಕಾಂಗ್ರೆಸ್-ಜೆಡಿಎಸ್ನ ಅತೃಪ್ತ ಶಾಸಕರನ್ನು ಸಂಪರ್ಕಿಸಿ ರಾಜೀನಾಮೆ ಕೊಡಿಸುವ ಮೂಲಕ ಸಮ್ಮಿಶ್ರ ಸರ್ಕಾರವನ್ನು ಪತನಗೊಳಿಸಲು ವ್ಯೂಹ ರಚಿಸಿದ್ದಾರೆ ಎನ್ನಲಾಗಿದ್ದು, ಈ ಹಿನ್ನಲೆ ಶಾಸಕರ ಚಲನವಲನಗಳ ಮೇಲೆ ತೀವ್ರ ನಿಗಾ ವಹಿಸಲು ಗುಪ್ತಚರ ಇಲಾಖೆಗೆ ಸೂಚನೆ ರವಾನೆಯಾಗಿದೆ. ಶಾಸಕರಷ್ಟೇ ಅಲ್ಲ, ಅವರ ಸಂಬಂಧಿಕರು, ಆಪ್ತರು ಮತ್ತು ಜಿಲ್ಲಾ ಮಟ್ಟದ ಪ್ರಭಾವಿ ನಾಯಕರ ಚಲನವಲನಗಳನ್ನು ಗಮನಿಸಿ ಕಾಲ ಕಾಲಕ್ಕೆ ವರದಿ ನೀಡಬೇಕು ಎಂದು ಸೂಚಿಸಿರುವುದಾಗಿ ಉನ್ನತ ಮೂಲಗಳು ತಿಳಿಸಿವೆ.
ಆಪರೇಷನ್ ಕಮಲದಿಂದ ಕಾಂಗ್ರೆಸ್ ಶಾಸಕರನ್ನು ಸೆಳೆಯಲು ಬಿಜೆಪಿ ಪ್ರಯತ್ನಿಸುತ್ತಿರುವ ಬೆನ್ನಲ್ಲೇ ಕಾಂಗ್ರೆಸ್-ಜೆಡಿಎಸ್ ನಾಯಕರು ಬಿಜೆಪಿ ಶಾಸಕರುಗಳನ್ನು ಸಂಪರ್ಕಿಸಿ ಆಪರೇಷನ್ ಕಮಲಕ್ಕೆ ತಿರುಗೇಟು ನೀಡಲು ಮುಂದಾಗಿದ್ದಾರೆ.
ಈಗಾಗಲೇ ಕಾಂಗ್ರೆಸ್ನ ಉಮೇಶ್ ಜಾಧವ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿ ಸೇರಿದ್ದು, ಲೋಕಸಭೆ ಚುನಾವಣೆಯಲ್ಲಿ ಮಲ್ಲಿಕಾರ್ಜುನ್ ಖರ್ಗೆ ವಿರುದ್ಧ ಸ್ಪರ್ಧಿಸಿದ್ದರು. ಆ ಫಲಿತಾಂಶದ ಬಗ್ಗೆ ಅತೃಪ್ತ ಶಾಸಕರು ತೀವ್ರ ಕುತೂಹಲ ಹೊಂದಿದ್ದು, ಒಂದು ವೇಳೆ ಉಮೇಶ್ ಜಾಧವ್ ಗೆಲುವು ಕಂಡರೆ ರಾಜೀನಾಮೆ ನೀಡಲು ದೋಸ್ತಿ ಪಕ್ಷಗಳ ಅತೃಪ್ತ ಶಾಸಕರು ಸರತಿ ಸಾಲಿನಲ್ಲಿ ಮುಂದಾಗುವ ಸಾಧ್ಯತೆ ಇದೆ.
ಉಮೇಶ್ ಜಾಧವ್ ಅವರ ರಾಜೀನಾಮೆಯಿಂದ ತೆರವಾಗಿರುವ ಚಿಂಚೋಳಿ ವಿಧಾನಸಭಾ ಕ್ಷೇತ್ರಕ್ಕೂ ಉಪಚುನಾವಣೆ ನಡೆಯುತ್ತಿದ್ದು, ಈ ಕ್ಷೇತ್ರವನ್ನು ಮತ್ತೆ ಗೆಲ್ಲುವ ಮೂಲಕ ಉಮೇಶ್ ಜಾಧವ್ ಅವರಿಗೆ ತಕ್ಕ ಪಾಠ ಕಲಿಸಲು ದೋಸ್ತಿ ಪಕ್ಷಗಳು ಮುಂದಾಗಿವೆ.
ಆಪರೇಷನ್ ಕಮಲಕ್ಕೆ ತುತ್ತಾದವರನ್ನು ಸೋಲಿಸಿ ಮುಂದಿನ ದಿನಗಳಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಪಕ್ಷ ಬಿಟ್ಟು ಹೋಗುವವರಿಗೆ ಎಚ್ಚರಿಕೆ ನೀಡುವುದು ಕಾಂಗ್ರೆಸ್ನ ಉದ್ದೇಶವಾಗಿದೆ. ಈ ನಡುವೆ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಏನೆಲ್ಲ ಕಸರತ್ತುಗಳನ್ನು ನಡೆಸಬೇಕು ಎಂಬ ಬಗ್ಗೆಯೂ ಚರ್ಚೆಗಳು ನಡೆಯುತ್ತಿವೆ.