ಪಣಜಿ, ಜ 30 (DaijiworldNews/HR): ಗೋವಾದ ಮೋಪಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಭೀತಿ ಸೃಷ್ಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಓರ್ವನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.
ವಿಮಲ್ ಪ್ರಜಾಪತಿ ಎಂಬಾತನನ್ನು ಮೋಪಾ ವಿಮಾನ ನಿಲ್ದಾಣ ಪೊಲೀಸರು ವಶಕ್ಕೆ ಪಡೆದಿದ್ದು, ಆತನ ವಿರುದ್ಧ ಐಪಿಸಿ ಸೆಕ್ಷನ್ 505, 336 ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ.
ಈ ಸಂದರ್ಭದಲ್ಲಿ ದೊರೆತ ಮಾಹಿತಿಯಂತೆ ಸ್ಪೈಸ್ ಜೆಟ್ ಸೆಕ್ಯೂರಿಟಿ ಮ್ಯಾನೇಜರ್ ಮೊಹಮ್ಮದ್ ಸಲಾವುದ್ದೀನ್ ರವರು 06.19 ಗಂಟೆಗೆ ಮೋಪಾ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್ ನಲ್ಲಿದ್ದಾಗ ಹೋಗುತ್ತಿದ್ದ ವಿಮಲ್ ಮಣಿಲಾಲ್ ಪ್ರಜಾಪತಿ ವಿಮಾನ ನಿಲ್ದಾಣದಲ್ಲಿ ಬಾಂಬ್ ಇದೆ ಎಂಬ ವದಂತಿಯನ್ನು ಹರಡಿಸಿದ್ದರು.
ಇನ್ನು ತಕ್ಷಣ ವಿಮಾನ ನಿಲ್ದಾಣದ ಅಧಿಕಾರಿಗಳು ಭದ್ರತಾ ವ್ಯವಸ್ಥೆಯೊಂದಿಗೆ ಇಡೀ ವಿಮಾನ ನಿಲ್ದಾಣವನ್ನು ತಪಾಸಣೆ ನಡೆಸಿದರು. ಆದರೆ ಬಾಂಬ್ ಅನ್ನು ಹೋಲುವ ಯಾವುದೇ ವಸ್ತು ಕೂಡ ಪತ್ತೆಯಾಗಿಲ್ಲ. ಬಾಂಬ್ ಭೀತಿ ಸೃಷ್ಟಿಸಿ ವದಂತಿ ಹಬ್ಬಿಸಿದ ಪ್ರಕರಣದಲ್ಲಿ ವಿಮಾನ ನಿಲ್ದಾಣದ ಆಡಳಿತ ಪೊಲೀಸರಿಗೆ ದೂರು ನೀಡಿದ ನಂತರ ಪೊಲೀಸರು ವಿಮಲ್ ಪ್ರಜಾಪತಿಯನ್ನು ಬಂಧಿಸಿದ್ದಾರೆ.