ಕೂಚ್ ಬೆಹಾರ್, ಜ 29 (DaijiworldNews/AK): ಲೋಕಸಭೆ ಚುನಾವಣೆಯಲ್ಲಿ ಕೇಸರಿ ಪಕ್ಷಕ್ಕೆ ಮತ ಹಾಕದಿದ್ದರೆ ಕೇಂದ್ರ ತನಿಖಾ ಸಂಸ್ಥೆಗಳನ್ನು ನಿಮ್ಮ ಮನೆಗಳಿಗೆ ಕಳುಹಿಸುವುದಾಗಿ ಬಿಜೆಪಿ ಬೆದರಿಕೆ ಹಾಕುತ್ತಿದೆ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಆರೋಪಿಸಿದ್ದಾರೆ.
ಲೋಕಸಭೆ ಚುನಾವಣೆಗೆ ಮುನ್ನ ರಾಜಕೀಯ ಲಾಭಕ್ಕಾಗಿ ಕೇಂದ್ರ ಸರ್ಕಾರ ಮತ್ತೆ ಸಿಎಎ ವಿಷಯವನ್ನು ಪ್ರಸ್ತಾಪಿಸುತ್ತಿದೆ ಎಂದು ಮಮತಾ ಬ್ಯಾನರ್ಜಿ ಅಕ್ರೋಶ ವ್ಯಕ್ತಪಡಿಸಿದ್ದಾರೆ.
ಇವತ್ತು ಕೇಂದ್ರ ಸಚಿವ ಮತ್ತು ಬಿಜೆಪಿ ನಾಯಕ ಶಾಂತನು ಠಾಕೂರ್ ಅವರು ಮುಂದಿನ ಏಳು ದಿನಗಳಲ್ಲಿ ಭಾರತದಾದ್ಯಂತ ಸಿಎಎ ಜಾರಿಗೆ ತರಲಾಗುವುದು ಎಂದು ಹೇಳಿಕೆ ನೀಡಿದ್ದರು. ಇದೀಗ ಲೋಕಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಮತಕ್ಕಾಗಿ ಕೇಸರಿ ಪಕ್ಷ ಮತ್ತೆ "ಸಿಎಎ" ಪ್ರಸ್ತಾಪಿಸಲು ಪ್ರಾರಂಭಿಸಿದೆ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಯಾವುದೇ ನಿರ್ದಿಷ್ಟ ದೇವರನ್ನು ಪೂಜಿಸಲು ಬಿಜೆಪಿಯ ಅನುಮತಿ ಬೇಕಿಲ್ಲ ಎಂದ ಪಶ್ಚಿಮ ಬಂಗಾಳ ಮುಖ್ಯಮಂತ್ರಿ, ನಾನು ರಾಮಾಯಣ, ಕುರಾನ್, ಬೈಬಲ್ ಮತ್ತು ಗುರು ಗ್ರಂಥ ಸಾಹಿಬ್ ಅನ್ನು ಅನುಸರಿಸುತ್ತೇನೆ ... ನಾನು ಬಡವರ ಮನೆಗೆ ಭೇಟಿ ನಿಡಿ ಅಲ್ಲಿ ಹೊರಗಿನಿಂದ ತಂದ ಆಹಾರವನ್ನು ತಿನ್ನುವಂತಹ ನಾಟಕ ಮಾಡುವುದಿಲ್ಲ ಎಂದು ತಿರುಗೇಟು ನೀಡಿದ್ದಾರೆ.
ಪೌರತ್ವ(ತಿದ್ದುಪಡಿ) ಕಾಯಿದೆ "ನಿಮ್ಮನ್ನು ನೀವು ರಕ್ಷಿಸಿಕೊಳ್ಳಲು" ಮತದಾರರ ಪಟ್ಟಿಯಲ್ಲಿ ನಿಮ್ಮ ಹೆಸರು ಇದೆಯೇ ಎಂದು ಖಚಿತಪಡಿಸಿಕೊಳ್ಳಿ ಎಂದು ಟಿಎಂಸಿ ಮುಖ್ಯಸ್ಥೆ ಕೂಚ್ ಬೆಹಾರ್ನ ಸ್ಥಳೀಯರಿಗೆ, ವಿಶೇಷವಾಗಿ ರಾಜ್ಬನ್ಶಿಗಳಿಗೆ ಕರೆ ನೀಡಿದ್ದಾರೆ.