ನವದೆಹಲಿ,ಜ 29 (DaijiworldNews/RA):2024ರ ಸಾರ್ವತ್ರಿಕ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆಯಲ್ಲಿ ಬಿಜೆಪಿ ಮತ್ತು ಪ್ರತಿಪಕ್ಷಗಳು ಗೆಲ್ಲುವ ನಿಟ್ಟಿನಲ್ಲಿ ತೀವ್ರ ಪೈಪೋಟಿಯನ್ನು ನಡೆಸುತ್ತಿವೆ.
ಬಿಜೆಪಿಯ ಅತಿದೊಡ್ಡ ಘೋಷಣೆಗಳಲ್ಲಿ ಒಂದಾದ ಅಯೋಧ್ಯೆಯಲ್ಲಿ ರಾಮ ಮಂದಿರದ ಉದ್ಘಾಟನೆ, 370 ನೇ ವಿಧಿ ರದ್ದತಿ ಕುರಿತು ಸುಪ್ರೀಂ ಕೋರ್ಟ್ ತೀರ್ಪು, ಇಂಡಿಯಾ ಒಕ್ಕೂಟದಲ್ಲಿನ ಬಿರುಕುಗಳು ಮತ್ತು ಬಿಹಾರದ ರಾಜಕೀಯ ವಿದ್ಯಾಮಾನಗಳು ಎಲ್ಲವೂ ಸದ್ಯ ಬಿಜೆಪಿಯ ಪರವಾಗಿಯೇ ಇದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ಪಟ್ಟಿದ್ದಾರೆ.
ಇಂಗ್ಲೆಂಡ್ ನ ಗಾರ್ಡಿಯನ್ ಪತ್ರಿಕೆ ಅಂಕಣವೂ, ರಾಜಕೀಯ ವಿಶ್ಲೇಷಕರನ್ನು ಉಲ್ಲೇಖಿಸಿ ಬಿಜೆಪಿಗೆ ಹ್ಯಾಟ್ರಿಕ್ ಗೆಲುವಿನ ಭವಿಷ್ಯ ನುಡಿದಿದ್ದು ದೇಶದ ಪ್ರಸ್ತುತ ರಾಜಕೀಯವನ್ನು ಗಮನಿಸಿದರೆ , ಬಿಜೆಪಿ ಪರ ಅಲೆ ಕಂಡುಬರುತ್ತಿದ್ದು, ದಕ್ಷಿಣ ಮತ್ತು ಪೂರ್ವ ಭಾರತದ ಭಾಗದಲ್ಲಿ ಬಿಜೆಪಿಯ ವಿರುದ್ಧ ಪ್ರತಿರೋಧ ಕಂಡುಬಂದರೂ, ರಾಷ್ಟ್ರೀಯ ಮಟ್ಟದಲ್ಲಿ ಗಮನಿಸಿದಾಗ ವಿರೋಧ ಪಕ್ಷವು ’ದುರ್ಬಲ ’ ಮತ್ತು’ವಿಘಟನೆ ’ಯಾಗಿರುವಂತೆ ಕಂಡುಬರುತ್ತಿದೆ ಎಂದು ಅಂಕಣದಲ್ಲಿ ವಿವರಿಸಲಾಗಿದೆ.
ಆಗಸ್ಟ್ 6, 2019 ರಂದು ಲೋಕಸಭಾ ಚುನಾವಣೆಯ ಪೂರ್ವದಲ್ಲಿ ಬಿಜೆಪಿಯು ತನ್ನ ಚುನಾವಣಾ ಯೋಜನೆಗಳಲ್ಲಿ ಒಂದಾದ ಸಂವಿಧಾನದ 370 ನೇ ವಿಧಿಯನ್ನು ರದ್ದು ಮಾಡಿತ್ತು. ಕೇಂದ್ರದ ಈ ನಿರ್ಧಾರವನ್ನು ಡಿಸೆಂಬರ್ 11, 2023 ರಂದು ಸುಪ್ರೀಂ ಕೋರ್ಟ್ ಎತ್ತಿ ಹಿಡಿದಿತ್ತು.
ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಬಿಜೆಪಿಗೆ ದೊಡ್ಡ ಉತ್ತೇಜನವನ್ನು ನೀಡಿದ್ರೆ,ಈ ನಿರ್ಧಾರವನ್ನು ಮುಂದಿನ ಚುನಾವಣೆಯಲ್ಲಿ ದಾಳವಾಗಿ ಉಪಯೋಗಿಸಲು ಕಾಯುತ್ತಿದ್ದ ವಿರೋಧ ಪಕ್ಷಗಳಿಗೆ ಬಹುದೊಡ್ಡ ಹೊಡೆತ ನೀಡುವ ಸಾಧ್ಯತೆ ಇದೆ ಎನ್ನಲಾಗಿದೆ.
ಈ ತೀರ್ಪಿನ ನಂತರ ಬಿಜೆಪಿಯ ಹೆಚ್ಚಿನ ಗೆಲುವಿಗೆ ಇಂಡಿಯಾ ಮೈತ್ರಿ ಸದಸ್ಯರ ನಡುವಿನ ಭಿನ್ನಾಭಿಪ್ರಾಯಗಳು ಕಾರಣ ಅನ್ನುವ ಮಾತುಗಳು ಕೇಳಿ ಬರ್ತಾ ಇದೆ. ಅದರ ಸದಸ್ಯರಲ್ಲೊಬ್ಬರಾದ ಆಮ್ ಆದ್ಮಿ ಪಕ್ಷವು 2019 ರಲ್ಲಿ 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದನ್ನು ಬೆಂಬಲಿಸಿತು. ಈ ಮಧ್ಯೆ ಎಡಪಕ್ಷಗಳು ವಿಶೇಷ ಸ್ಥಾನಮಾನವನ್ನು ಮರುಸ್ಥಾಪಿಸುವಂತೆ ಒತ್ತಾಯಿಸುತ್ತಿದ್ದವು. ಇದು ಕಾಂಗ್ರೆಸ್ ನ ನಿಲುವಿಗೆ ಸ್ವಲ್ಪ ವ್ಯತಿರಿಕ್ತವಾಗಿತ್ತು.ಕೇಂದ್ರ ಸರ್ಕಾರದ ಈ ಕ್ರಮಕ್ಕೆ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದರೂ ಆರ್ಟಿಕಲ್ ನ್ನು 370 ನ್ನು ಮರು ಜಾರಿಗೊಳಿಸಬೇಕೆಂದು ಕಾಂಗ್ರೆಸ್ ಎಂದಿಗೂ ಒತ್ತಾಯ ಮಾಡಿಲ್ಲ.
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮಾಡುವುದು ಬಿಜೆಪಿಯ ದೀರ್ಘಾವಧಿಯ ಭರವಸೆಯಾಗಿತ್ತು.ರಾಮಮಂದಿರ ನಿರ್ಮಾಣದ ಕೇಂದ್ರದಲ್ಲಿ ಪ್ರಧಾನಿ ಮೋದಿಯವರ ಸ್ಥಾನವು ತನ್ನ ಪಾತ್ರವನ್ನು ವಹಿಸಿದ್ದು ಶಂಕುಸ್ಥಾಪನೆಯಿಂದ ಹಿಡಿದು ದೇವಾಲಯದ ಪ್ರತಿಷ್ಠಾಪನಾ ಸಮಾರಂಭದಲ್ಲಿ 'ಯಜಮಾನ'ವಾಗಿ ಪಾಲ್ಗೊಳ್ಳುವವರೆಗೆ, ಧಾರ್ಮಿಕ ಉತ್ಸಾಹಕ್ಕೆ ಅನುಗುಣವಾಗಿ ಭಾರತದ ಆರ್ಥಿಕ,ರಾಜಕೀಯ ಮತ್ತು ಕಾರ್ಯತಂತ್ರದ ಕ್ಷೇತ್ರಗಳಲ್ಲಿ ನಡೆಯುತ್ತಿರುವ ಮೆರವಣಿಗೆಯಲ್ಲಿ ಬಿಜೆಪಿ ಮುಂಚೂಣಿಯಲ್ಲಿದೆ ಎಂದು ಬಿಜೆಪಿ ಹೇಳಿಕೊಂಡಿದೆ.
ಭಾರತ್ ಜೋಡೋ ನ್ಯಾಯ್ ಯಾತ್ರೆಯ ಸಂದರ್ಭದಲ್ಲಿ ಇಂಡಿಯಾ ಒಕ್ಕೂಟದಲ್ಲಿನ ಪ್ರಮುಖ ಸದಸ್ಯರಲ್ಲಿ ಒಂದಾದ ಕಾಂಗ್ರೆಸ್ ಪಶ್ಚಿಮ ಬಂಗಾಳದಲ್ಲಿ ವಿರೋಧ ವ್ಯಕ್ತವಾದ ಹಿನ್ನಲೆಯಲ್ಲಿ ಮಮತಾ ಬ್ಯಾನರ್ಜಿ ಅವರನ್ನು ಚುನಾವಣೆಗೆ ರಾಜ್ಯದಲ್ಲಿ "ಏಕಾಂಗಿಯಾಗಿ ಸ್ಪರ್ಧಿಸುವಂತೆ ಮಾಡಿತು.
ಈ ಮಧ್ಯೆ ಮತ್ತೊಂದು ಮಿತ್ರ ಪಕ್ಷವಾದ ಪಂಜಾಬ್ ನ ಆಮ್ ಆದ್ಮಿ ಪಕ್ಷವು ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನೊಂದಿಗೆ ಸೀಟು ಹಂಚಿಕೆ ಒಪ್ಪಂದ ಇಷ್ಟವಿಲ್ಲದೇ ಏಕಾಂಗಿಯಾಗಿ ಹೋರಾಟ ಮಾಡುವ ಬಗ್ಗೆ ನಿಲುವು ತಳೆದಿದ್ದು ಇದು ಇಂಡಿಯಾ ಒಕ್ಕೂಟದಲ್ಲಿನ ಬಿರುಕುಗಳನ್ನು ಮತ್ತಷ್ಟು ಹೆಚ್ಚಿಸಿದೆ.
ಆದರೆ ಭಾನುವಾರ ಅದರ ಸಂಚಾಲಕ ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ ರಾಜ್ಯದಲ್ಲಿ 'ಮಹಾಘಟಬಂಧನ್' ಒಕ್ಕೂಟವನ್ನು ತ್ಯಜಿಸಿ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ಬಿಜೆಪಿಯೊಂದಿಗೆ ಹೋದಾಗ ಇಂಡಿಯಾ ಒಕ್ಕೂಟಕ್ಕೆ ಹೊಡೆತ ಬಿದ್ದಿದೆ.
ಒಟ್ಟಾರೆ ಮುಂದಿನ ಲೋಕಸಭೆ ಚುನಾವಣೆಯನ್ನು ಗಮನದಲ್ಲಿರಿಸಿ ಹೇಳುವುದಾದರೆ, ಪ್ರಸ್ತುತ ರಾಜಕೀಯ ಬೆಳವಣಿಗೆಗಳು, ಬಿಜೆಪಿ ಗೆಲುವಿನ ಹಾದಿ ಸುಗಮವಾಗಿರುವಂತೆ ಕಂಡರೂ, ಚುನಾವಣೆಯ ಕೊನೆಯ ಕ್ಷಣದ ರಾಜಕೀಯ ಬೆಳವಣಿಗೆಗಳು ಅಚ್ಚರಿಯ ಫಲಿತಾಂಶಕ್ಕೆ ದಾರಿ ಮಾಡಿಕೊಡುವುದಂತೂ ಖಂಡಿತಾ.