ನವದೆಹಲಿ, ಎ24(Daijiworld News/SS): ಸೇನೆಗೆ ಸೇರಿ ಸೈನಿಕನಾಗಬೇಕು, ದಂಡನಾಯಕನಾಗಬೇಕೆಂಬ ಕನಸು ಇದ್ದಿತ್ತು. ನಾನು ಪ್ರಧಾನಿಯಾಗಬೇಕೆಂಬ ಯೋಚನೆ ಮಾಡಿರಲಿಲ್ಲ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಬಾಲಿವುಡ್ ನಟ ಅಕ್ಷಯ್ ಕುಮಾರ್ ನಡೆಸಿದ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಸೈನಿಕರನ್ನು ನೋಡಿದರೆ ನಾನು ಕೂಡಾ ಅವರಿಗೆ ಸೆಲ್ಯೂಟ್ ಹೊಡೆಯುತ್ತಿದ್ದೆ. ಸೇನೆಗೆ ಸೇರಿ ದಂಡನಾಯಕನಾಗಬೇಕೆಂಬ ಕನಸು ಕೂಡ ಇದ್ದಿತ್ತು. ನಾನು ಪ್ರಧಾನಿಯಾಗಬೇಕೆಂಬ ಯೋಚನೆ ಮಾಡಿರಲಿಲ್ಲ. ನಾನೇನು ಯೋಚಿಸಿರಲಿಲ್ಲವೋ ಆ ಸ್ಥಾನಕ್ಕೇರಿದ್ದೇನೆ. ಸುತ್ತಾಡುತ್ತಾ ಇಲ್ಲಿಗೆ ತಲುಪಿದ್ದೇನೆ ಎಂದು ಹೇಳಿದರು.
ಪುಸ್ತಕಗಳೆಂದರೆ ನನಗೆ ಬಹಳ ಇಷ್ಟ. ಪುಸ್ತಕಗಳನ್ನು ಹೆಚ್ಚಾಗಿ ಓದುತ್ತಿದ್ದೆ. ಚಿಕ್ಕವನಿದ್ದಾಗ ಗಣ್ಯ ವ್ಯಕ್ತಿಗಳ ಜೀವನಾಧಾರಿತ ಪುಸ್ತಕ ಓದುವ ಹವ್ಯಾಸ ನನಗಿತ್ತು ಎಂದು ಹೇಳಿದರು.
ಇದೇ ವೇಳೆ ನಿಮಗೆ ಮಾವಿನ ಹಣ್ಣು ಇಷ್ಟವೇ ಎಂದು ಅಕ್ಷಯ್ ಕುಮಾರ್ ಕೇಳಿದ್ದು, ಇದಕ್ಕೆ ಪ್ರತಿಕ್ರಿಯಿಸಿದ ಅವರು, ನಾನು ಮಾವಿನ ಹಣ್ಣು ತಿನ್ನುತ್ತೇನೆ ಹಾಗೂ ಮಾವು ನನಗೆ ಬಹಳ ಇಷ್ಟ. ನಾನು ಚಿಕ್ಕವನಿದ್ದಾಗ ನನ್ನ ಕುಟುಂಬದ ಆರ್ಥಿಕ ಸ್ಥಿತಿ ಉತ್ತಮವಾಗಿರಲಿಲ್ಲ. ಮಾವಿನ ಹಣ್ಣು ಖರೀದಿಸುವುದು ಅಸಾಧ್ಯವಾಗಿತ್ತು. ಆದರೆ ನಾವು ಮಾವಿನ ತೋಪಿಗೆ ತೆರಳಿ ಮರ ಹತ್ತಿ ತಾಜಾ ಹಣ್ಣುಗಳನ್ನು ತಿನ್ನುತ್ತಿದ್ದೆವು ಎಂದು ತಿಳಿಸಿದರು.
ನಾನು ಗುಜರಾತ್ ಸಿಎಂ ಆಗಿದ್ದಾಗ ನನ್ನ ಬಳಿ ಬ್ಯಾಂಕ್ ಅಕೌಂಟ್ ಇರಲಿಲ್ಲ. ಶಾಸಕನಾದ ಮೇಲೆ ಸಂಬಳ ಬರಲಾರಂಭಿಸಿತು. ಶಾಲೆಯಲ್ಲಿದ್ದಾಗ ದೇನಾ ಬ್ಯಾಂಕ್ ಸಿಬ್ಬಂದಿ ಬಂದು ಎಲ್ಲಾ ಮಕ್ಕಳಿಗೆ ಹಣ ಸಂಗ್ರಹಿಸುವ ಹುಂಡಿ ನೀಡಿ, ಇದರಲ್ಲಿ ಹಣ ಕೂಡಿಟ್ಟು ಬ್ಯಾಂಕ್ ನಲ್ಲಿ ಜಮೆ ಮಾಡಿ ಎಂದಿದ್ದರು. ಆದರೆ ನಮ್ಮ ಬಳಿ ಹುಂಡಿಗೆ ಹಾಕಲು ಹಣವಿರಬೇಕಲ್ಲವೇ..? ಅಂದಿನಿಂದ ಅಕೌಂಟ್ ನಿಷ್ಕ್ರಿಯವಾಗಿ ಬಿದ್ದಿತ್ತು ಎಂದು ಹೇಳಿದರು.