ಬೆಂಗಳೂರು, ಎ24(Daijiworld News/SS): ರಾಷ್ಟ್ರೀಯ ಸ್ವಯಂ ಸೇವಕ ಸಂಘ (ಆರ್ಎಸ್ಎಸ್) ದೇಶದ ಜನರಲ್ಲಿ ಮೇಲು ಕೀಳು, ಭೇದ-ಭಾವ ಮತ್ತು ಜಾತಿ ಮಂತ್ರದ ವಿಷ ಬೀಜ ಬಿತ್ತುತ್ತಿದೆ ಎಂದು ವಿಚಾರವಾದಿ ಡಾ.ಕೆ.ಎಸ್. ಭಗವಾನ್ ಹೇಳಿದರು.
ನಗರದಲ್ಲಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ಕೆಲವರು ಸಂವಿಧಾನಕ್ಕೆ ತಿದ್ದುಪಡಿ ತರಬೇಕೆಂದು ಹೇಳುತ್ತಾರೆ. ಅದರ ವಿರುದ್ಧ ಹೋರಾಟ ಮಾಡಲು ಯಾರೂ ಮುಂದೆ ಬರುವುದಿಲ್ಲ. ಸಂವಿಧಾನವನ್ನು ಏಕೆ ತಿದ್ದುಪಡಿ ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.
ನಾವು ಹಲವು ದೇವರುಗಳನ್ನು ಸಾವಿರಾರು ವರ್ಷಗಳಿಂದ ಪೂಜಿಸುತ್ತಲೇ ಇದ್ದೇವೆ. ಆದರೆ, ಯಾವ ದೇವರೂ ದಲಿತ, ಹಿಂದುಳಿದ ವರ್ಗದವರನ್ನು ಮತ್ತು ಶೂದ್ರರನ್ನು ಉದ್ಧಾರ ಮಾಡಿಲ್ಲ. ಆದ್ದರಿಂದ ಎಲ್ಲ ದೇವರುಗಳನ್ನು ಗಟಾರಕ್ಕೆ ಎಸೆಯಿರಿ ಎಂದು ದೂರಿದರು.
ಎಲ್ಲ ಕ್ಷುದ್ರರು ಮನು ಸ್ಮೃತಿಯಲ್ಲಿ ಬ್ರಾಹ್ಮಣರ ಗುಲಾಮರು, ಈ ಜನ ಬ್ರಾಹ್ಮಣರ ಸೇವೆ ಮಾಡಲು ಸೃಷ್ಟಿಯಾಗಿದ್ದಾರೆ ಎಂದು ಹೇಳಲಾಗಿದೆ. ಸಾವಿರಾರು ವರ್ಷಗಳಿಂದ ಶೋಷಣೆ, ದಬ್ಬಾಳಿಕೆಗೆ ಒಳಗಾಗಿರುವ ದಲಿತರು, ಶೋಷಿತರನ್ನು ದೇವರು ರಕ್ಷಿಸಿಲ್ಲ. ಹೀಗಿರುವಾಗ ಆ ದೇವರನ್ನು ಏಕೆ ಪೂಜಿಸಬೇಕು..? ಎಂದು ಪ್ರಶ್ನಿಸಿದರು.
ಕೆಳಜಾತಿಯ ಜನರನ್ನು ತುಳಿಯುವುದಕ್ಕಾಗಿಯೇ ದೇವರುಗಳು ಹುಟ್ಟಿಕೊಂಡರು. ದಲಿತರು, ಶೋಷಿತರ ಮೇಲೆ ನಿರಂತರವಾಗಿ ದಬ್ಬಾಳಿಕೆ ನಡೆಸುವ ಮೂಲಕ ಎಲ್ಲ ಧರ್ಮಗಳಲ್ಲಿ ರಕ್ತ ಹರಿದಿದೆ. ಆದರೆ ಬೌದ್ಧ ಧರ್ಮದಲ್ಲಿ ಮಾತ್ರ ಅಂತಹ ಸಂಗತಿಗಳು ಕಾಣುವುದಿಲ್ಲ ಎಂದು ಹೇಳಿದರು.
ವಾಲ್ಮೀಕಿ ರಾಮಾಯಣವನ್ನು ಸತತ 2 ವರ್ಷಗಳ ಕಾಲ ಅಧ್ಯಯನ ಮಾಡಿದ್ದೇನೆ. ನಿಜವಾದ ರಾಮ ಯಾರು ಎಂಬುದನ್ನು ಪತ್ತೆಹಚ್ಚಿದ್ದೇನೆ. ವಾಲ್ಮೀಕಿ ಎಲ್ಲೂ ಕೂಡ ರಾಮ ದೇವರು ಎಂದು ಹೇಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.