ಕಲಬುರುಗಿ, ಜ 28 (DaijiworldNews/SK): ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್ ಇಂಡಿಯಾ ಮೈತ್ರಿಕೂಟ ತೊರೆದರು ನಮ್ಮ ಹೋರಾಟ ಮುಂದುವರೆಯಲಿದೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
ಬಿಹಾರ ಮುಖ್ಯಮಂತ್ರಿ ಸ್ಥಾನಕ್ಕೆ ನಿತೀಶ್ ಕುಮಾರ್ ರಾಜೀನಾಮೆ ನೀಡಿರುವ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಹಾಗೂ ಅವರ ಮಗ ತೇಜಸ್ವಿ ಯಾದವ್ ಅವರೊಂದಿಗೆ ಮಾತನಾಡುವಾಗ ನಿತೀಶ್ ಮಹಾಘಟಬಂಧನ್ ತೊರೆಯುವ ಬಗ್ಗೆ ಮಾಹಿತಿ ನೀಡಿದ್ದರು. ಅದು ಇವತ್ತು ನಿಜವಾಗಿದೆ. ಈ ಮೂಲಕ ಆಯಾರಾಮ್ ಗಯಾರಾಮ್ ಸಂಸ್ಕೃತಿವುಳ್ಳ ಅನೇಕ ರಾಜಕಾರಣಿಗಳು ದೇಶದಲ್ಲಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮುಂಬರುವ ಲೋಕಸಭಾ ಚುನಾವಣೆ ಟಿಕೆಟ್ ಹಂಚಿಕೆ ಕುರಿತು ಇಂಡಿಯಾ ಮೈತ್ರಿಕೂಟದ ಇತರ ಪಕ್ಷಗಳೊಂದಿಗೆ ಚರ್ಚೆ ನಡೆಸಲು ಆರು ಜನರ ಸಮಿತಿ ರಚಿಸಲಾಗಿದ್ದು, ವಿವಿಧ ಪಕ್ಷಗಳೊಂದಿಗೆ ಕೂಡ ಸೀಟು ಹಂಚಿಕೆ ಕುರಿತು ಚರ್ಚೆ ನಡೆದಿದೆ. ಕೆಲವು ಕಡೆ ಒಮ್ಮತಕ್ಕೆ ಬರಲಾಗಿದೆ. ಇನ್ನೂ ಕೆಲವೆಡೆ ಬಂದಿಲ್ಲ ಎಂದು ಅವರು ತಿಳಿಸಿದರು.