ಚಂಡೀಗಢ, ಜ 28 (DaijiworldNews/SK): ಮಾಜಿ ಕೇಂದ್ರ ಸಚಿವ ಮತ್ತು ಚಂಡೀಗಢದ ಮಾಜಿ ಸಂಸದ ಹರ್ಮೋಹನ್ ಧವನ್ ಅವರು ದೀರ್ಘಕಾಲದ ಅನಾರೋಗ್ಯದದಿಂದ ಮೊಹಾಲಿಯ ಖಾಸಗಿ ಆಸ್ಪತ್ರೆಯಲ್ಲಿ ಜ. 27 ರಂದು ಕೊನೆಯುಸಿರೆಳೆದಿದ್ದಾರೆ.
ಪಶ್ಚಿಮ ಪಾಕಿಸ್ತಾನದ ಕ್ಯಾಂಪ್ಬೆಲ್ಪುರದ ಫತೇಜಂಗ್ ಜಿಲ್ಲೆಯಲ್ಲಿ ಜನಿಸಿದ ಧವನ್(83) ಅವರು 1947 ರಲ್ಲಿ ಭಾರತ ವಿಭಜನೆಯ ನಂತರ ಕುಟುಂಬ ಸಮೇತ ಭಾರತಕ್ಕೆ ಬಂದಿದ್ದರು.
1977 ರಲ್ಲಿ ರಾಜಕೀಯಕ್ಕೆ ಪ್ರವೇಶಿಸಿ ಧವನ್ ಅವರು ದಿವಂಗತ ಪ್ರಧಾನಿ ಚಂದ್ರಶೇಖರ್ ಸರ್ಕಾರದಲ್ಲಿ ಕೇಂದ್ರ ರಾಜ್ಯ ಸಚಿವರಾಗಿದ್ದರು.
1981 ರಲ್ಲಿ ಜನತಾ ಪಕ್ಷದ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದರು. ನಂತರ 1989 ರಲ್ಲಿ ಚಂಡೀಗಢ ಕ್ಷೇತ್ರದಿಂದ ಸಂಸತ್ ಸದಸ್ಯರಾಗಿ ಆಯ್ಕೆಯಾದರು ಮತ್ತು ಚಂದ್ರಶೇಖರ್ ಅವರ ಸರ್ಕಾರದಲ್ಲಿ ನಾಗರಿಕ ವಿಮಾನಯಾನ ಸಚಿವರಾಗುವ ಮೂಲಕವೂ ರಾಜಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು.