ನವದೆಹಲಿ, ಜ 28 (DaijiworldNews/SK): ಎಂ.ವಿ. ಮಾರ್ಲಿನ್ ಲುವಾಂಡಾ ವಾಣಿಜ್ಯ ಹಡಗಿನ ಮೇಲೆ ಇರಾನ್ ಬಂಡುಕೋರರು ಗಲ್ಫ್ ಆಫ್ ಏಡನ್ ಕೊಲ್ಲಿಯಲ್ಲಿ ಕ್ಷಿಪಣಿ ದಾಳಿ ನಡೆಸಿದ್ದಾರೆ. ಈ ದಾಳಿಯ ಪರಿಣಾಮ ನೌಕೆಯಲ್ಲಿ ಬೆಂಕಿ ಹೊತ್ತಿಕೊಂಡಿದ್ದು, ಬೆಂಕಿಯನ್ನು ಭಾರತದ ಯುದ್ಧನೌಕೆ ಐಎನ್ಎಸ್ ವಿಶಾಖಪಟ್ಟಣ ನಂದಿಸಿದೆ ಎಂದು ವರದಿಯಾಗಿದೆ.
ಕೆಂಪು ಸಮುದ್ರ ಮತ್ತು ಗಲ್ಫ್ ಆಫ್ ಏಡನ್ ಕೊಲ್ಲಿಯು ವಾಣಿಜ್ಯ ಚಟುವಟಿಕೆಗಳಿಗೆ ಪ್ರಮುಖ ಜಲಮಾರ್ಗವಾಗಿದ್ದು, ಮಾರ್ಷಲ್ ದ್ವೀಪದಲ್ಲಿ ಎಂ.ವಿ. ಮಾರ್ಲಿನ್ ಲುವಾಂಡಾ ವಾಣಿಜ್ಯ ಹಡಗಿನ ಮೇಲೆ ಹುತಿ ಬಂಡುಕೋರರು ಖಂಡಾಂತರ ಕ್ಷಿಪಣಿಯ ದಾಳಿ ನಡೆಸಿರುವುದಾಗಿ ಅಮೆರಿಕ ಸೆಂಟ್ರಲ್ ಕಮಾಂಡ್ ಹೇಳಿದೆ.
ಘಟನೆಯ ಬಗ್ಗೆ ಮಾಹಿತಿ ನೀಡಿದ ಭಾರತೀಯ ನೌಕಾಪಡೆಯ ವಕ್ತಾರ ಕಮಾಂಡರ್ ವಿವೇಕ್ ಮಧ್ವಲ್ ಅವರು, ವಾಣಿಜ್ಯ ಹಡಗಿನ ಮೇಲೆ ಬಂಡುಕೋರರು ಕ್ಷಿಪಣಿ ದಾಳಿ ನಡೆಸಿದಾಗ ಹಡಗಿನಿಂದ ನೆರವಿಗಾಗಿ ಕರೆ ಬಂದಿದ್ದು, ಈ ವೇಳೆ ಭಾರತದ ಕ್ಷಿಪಣಿ ವಿರೋಧಿ ಯುದ್ಧನೌಕೆ ಐಎನ್ಎಸ್ ವಿಶಾಖಪಟ್ಟಣಂ ಅನ್ನು ಕಾರ್ಯಾಚರಣೆಗೆ ಇಳಿಸಲಾಗಿತ್ತು.
ಎಂ.ವಿ ಮಾರ್ಲಿನ್ ಲುವಾಂಡಾ ಸಿಬ್ಬಂದಿ ಜೊತೆ ಸೇರಿ 6 ಗಂಟೆಗಳ ಸತತ ಪ್ರಯತ್ನದ ಬಳಿಕ ಭಾರತೀಯ ನೌಕಾ ಅಗ್ನಿಶಾಮಕ ತಂಡವು ಯಶಸ್ವಿಯಾಗಿ ಬೆಂಕಿಯನ್ನು ಹತೋಟಿಗೆ ತಂದಿದೆ ಎಂದು ತಿಳಿಸಿದರು.
ಈ ದಾಳಿ ನಡೆದ ವೇಳೆ ವಾಣಿಜ್ಯ ಹಡಗಿನಲ್ಲಿ 22 ಭಾರತೀಯರು ಸಹ ಇದ್ದರು ಎಂದು ವರದಿಯಾಗಿದೆ.