ಬಳ್ಳಾರಿ,ಜ 28 (DaijiworldNews/RA): ಶಿಸ್ತು, ತಾಳ್ಮೆ, ಸತತ ಪ್ರಯತ್ನ, ಸ್ವಶಕ್ತ ಶ್ರಮದ ಮೇಲೆ ವಿಶ್ವಾಸಗಳಿದ್ದಲ್ಲಿ ಗುರಿ ತಲುಪುವುದು ಸಾಧ್ಯ. ನಾವುಗಳು ಯಾವುತ್ತೂ ನಂಬಿಕೆ - ವಿಶ್ವಾಸಗಳನ್ನು ಕಳೆದುಕೊಳ್ಳಬಾರದು ಅಂತ ಸಾಧಿಸುವ ಯುವ ಮನಸ್ಸುಗಳಿಗೆ ಪ್ರೇರಣೆಯ ನುಡಿಗಳನ್ನಾಡುತ್ತಾರೆ ಐಎಎಸ್ ಅಧಿಕಾರಿಯಾಗಿರುವ ಬಳ್ಳಾರಿ ಮೂಲದ ಕೀರ್ತಿಕುಮಾರ್ ಪೂಜಾರ್.
ಇವರು ಯುಪಿಎಸ್ ಸಿ ಪರೀಕ್ಷೆಯಲ್ಲಿ 115ನೇ ರಾಂಕ್ ಪಡೆದು ಐಎಎಸ್ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮೊದಲ ಬಾರಿಗೆ ಯುಪಿಎಸ್ ಸಿ ಪರೀಕ್ಷೆ ಪಾಸು ಮಾಡಿ, ಭಾರತೀಯ ರೆವಿನ್ಯೂ ಸರ್ವೀಸ್ ನ ಆದಾಯ ತೆರಿಗೆ ಇಲಾಖೆಯ ಅಧಿಕಾರಿಯಾಗಿ ನಾಗ್ಪುರದಲ್ಲಿ ತರಬೇತಿ ಪಡೆಯುತ್ತಿರುತ್ತಾರೆ.ಎರಡನೇ ಬಾರಿ ಪುನಃ ಯುಪಿಎಸ್ ಸಿ ಪರೀಕ್ಷೆ ಬರೆದ್ರೂ ಯಾವುದೇ ಪ್ರಯೋಜವಾಗಲಿಲ್ಲ. ಮತ್ತೇ ಅವರು ಮೂರನೇ ಬಾರಿ ಪರೀಕ್ಷೆ ಬರೆದು ನನ್ನ ಬಾಲ್ಯದ ಕನಸನ್ನು ನನಸಾಗಿಸಿಕೊಳ್ಳುತ್ತಾರೆ.
ಪ್ರಾಂಶುಪಾಲ ಹನಮಂತಪ್ಪ ಪೂಜಾರ್ ಮತ್ತು ಗೃಹಿಣಿ ಹೇಮಾವತಿ ದಂಪತಿಗಳ ಪುತ್ರ ಕೀರ್ತಿ ಕುಮಾರ್ ಪೂಜಾರ್. ಹೊಸಪೇಟೆಯ ಟಿಬಿ ಡ್ಯಾಂನಲ್ಲಿ ಹೈಸ್ಕೂಲ್ ಓದಿ, ಸ್ಮೈಯೋರ್ ಕಾಲೇಜಿನಲ್ಲಿ ಪಿಯುಸಿ ವಿಜ್ಞಾನ ಓದಿ, ಎಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್ಸ್ ನಲ್ಲಿ ಬಿಇ ಪದವೀಧರನಾಗಿ, ಐಐಟಿ - ಮದ್ರಾಸ್ ವಿದ್ಯಾರ್ಥಿಯಾಗಿ ಸಾಧನೆಯ ಮೆಟ್ಟಿಲುಗಳನ್ನೇರುತ್ತಲೇ ಸಾಗಿದ ಇವರಿಗೆ ಬೆಂಬಲವಾಗಿ ನಿಂತವರು ಪೋಷಕರು, ಸ್ನೇಹಿತರು, ಮಾರ್ಗದರ್ಶಕರು ಮತ್ತು ಸಾಧಕರು.
ಬೆಂಗಳೂರಿನ ಬಿಎಚ್ಇಎಲ್ ನಲ್ಲಿ ಎಂಜಿನಿಯರಾಗಿ ಸೇವೆ ಸಲ್ಲಿಸಿ, ಡಿಅರ್ ಡಿಒದ ವಿಜ್ಞಾನಿಯಾಗಿ ನೇಮಕಗೊಂಡಿದ್ದರು. ಕೆಲಸದ ಜೊತೆ ಜೊತೆಯಲ್ಲಿ ಓದುತ್ತಲೇ ಇದ್ದ, ಕೀರ್ತಿ ಕುಮಾರ್ ಅವರಿಗೆ ಯುಪಿಎಸ್ ಸಿ ಪರೀಕ್ಷೆ ಪಾಸು ಮಾಡುವ ಕನಸು. ಹೆಂಡತಿ ಸೌಮ್ಯಶ್ರೀ ಪೂಜಾರ್ ಎಂಬಿಎ ಪದವೀಧರೆ ಆಗಿದ್ದು ಇವರ ತಮ್ಮ ಪತಿಯ ಸಾಧನೆಗೆ ಬೆಂಬಲವಾಗಿ ನಿಂತರು.
ಏನೇ ಆಗಲಿ ಸಾಧಿಸುವ ಛಲವಿದ್ದರೆ ಯಾವುದು ಅಸಾಧ್ಯವಲ್ಲ.ಸಾಧಿಸುವ ಮನಸ್ಸಿರಬೇಕು ಎಂದು ತೋರಿಸಿಕೊಟ್ಟ ಕೀರ್ತಿಕುಮಾರ್ ಪೂಜಾರ್ ಸಾಧನೆ ಸಾಧಿಸುವ ಎಷ್ಟೋ ಯುವಕ ಸಾಧಕರಿಗೆ ಪ್ರೇರಣೆಯಾಗಲಿ ಅನ್ನುವುದೇ ನಮ್ಮ ಆಶಯ.