ಧಾರವಾಡ,ಜ 27 (DaijiworldNews/RA):ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎನ್ನುತ್ತಿದ್ದಾರೆ, ಪುಣ್ಯಕ್ಕೆ ರಾಷ್ಟ್ರಪತಿ ಎಂದಿಲ್ಲ. ನಾನು ಧಾರವಾಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಎಂದು ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕ್ಷೇತ್ರದಲ್ಲಿ ಶಾಸಕರು, ನಗರ ಘಟಕದ ಅಧ್ಯಕ್ಷರು ಹಾಗೂ ಕಾರ್ಯಕರ್ತರು ಚುನಾವಣೆ ಸಿದ್ಧತೆಯಲ್ಲಿದ್ದಾರೆ. ಇದರ ನಡುವೆ ಕೆಲವರು ನನ್ನನ್ನು ರಾಷ್ಟ್ರೀಯ ಅಧ್ಯಕ್ಷ ಎನ್ನುತ್ತಿದ್ದಾರೆ.ಪುಣ್ಯಕ್ಕೆ ರಾಷ್ಟ್ರಪತಿ ಆಗುತ್ತಾರೆ ಎಂದಿಲ್ಲ. ಜೋಶಿ ರಾಷ್ಟ್ರಪತಿ ಆಗುತ್ತಾರೆ, ಶೆಟ್ಟರ್ ಅಭ್ಯರ್ಥಿ ಆಗುತ್ತಾರೆ ಎಂದು ಹೇಳುತ್ತಿಲ್ಲ ಎಂದಿದ್ದಾರೆ.
ಇನ್ನು ಶೆಟ್ಟರ್ ಅವರು ಆರು ತಿಂಗಳ ಹಿಂದೆಯೇ ವಾಪಾಸ್ ಬರುತ್ತಾರೆ ಎಂದಿದ್ದೆ. ಅವರು ಬಂದಿದ್ದಕ್ಕೆ ಸಂತೋಷವಿದೆ.ಇದನ್ನು ನಾನು ವ್ಯಂಗ್ಯವಾಗಿ ಹೇಳುತ್ತಿಲ್ಲ. ಈ ಭಾಗದಲ್ಲಿ ಎಲ್ಲರೂ ಒಂದುಗೂಡಿ ಪಕ್ಷ ಬಲವರ್ಧನೆ ಮಾಡುತ್ತೇವೆ ಎಂದರು.
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವನ್ನು ಐದು ವರ್ಷ ನಡೆಸಬೇಕು.ಆದರೆ ಆಂತರಿಕ ಕಚ್ಚಾಟದಿಂದ ಕಾಂಗ್ರೆಸ್ ನವರು ಸರ್ಕಾರವನ್ನು ಸರಿಯಾಗಿ ನಡೆಸುತ್ತಿಲ್ಲ. ಈ ಬಗ್ಗೆ ಜನರಿಗೂ ಆಕ್ರೋಶವಿದೆ. ಇದು ನಮಗೆ ಅವಕಾಶವಾಗುತ್ತದೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.