ಬೆಂಗಳೂರು,ಜ 27 (DaijiworldNews/AK): ದೇಶದಲ್ಲಿ ಮೋದಿ ಗ್ಯಾರಂಟಿ ಎಂದರೆ ಅದು ನೈಜ ಗ್ಯಾರಂಟಿ ಎಂದು ಜನರು ಅರ್ಥ ಮಾಡಿಕೊಂಡಿದ್ದಾರೆ. ವಿಕಸಿತ ಭಾರತ ಯಾತ್ರೆಯಿಂದ ಇದು ಸಾಧ್ಯವಾಗಿದೆ ಎಂದು ಕೇಂದ್ರ ಸಚಿವ ಭೂಪೇಂದ್ರ ಯಾದವ್ ಅವರು ವಿಶ್ಲೇಷಿಸಿದರು.
ನಗರದ ಅರಮನೆ ಮೈದಾನದಲ್ಲಿ ಇಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರ ಅಧ್ಯಕ್ಷತೆಯಲ್ಲಿ ರಾಜ್ಯ ಬಿಜೆಪಿ ವಿಶೇಷ ಕಾರ್ಯಕಾರಿಣಿಯನ್ನು ಉದ್ಘಾಟಿಸಿ ಅವರು ಮಾತನಾಡಿ, ಸುಳ್ಳು ಗ್ಯಾರಂಟಿಗಳ ಮೂಲಕ ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದಿದೆ ಎಂಬ ವಿಷಯವನ್ನು ಲೋಕಸಭಾ ಚುನಾವಣಾ ಪ್ರಚಾರಕ್ಕೆ ತೆರಳಿದಾಗ ತಿಳಿಸುವಂತೆ ಅವರು ಮನವಿ ಮಾಡಿದರು.
ಮಧ್ಯಪ್ರದೇಶ, ರಾಜಸ್ಥಾನ ಮತ್ತು ಛತ್ತೀಸ್ಗಡದ ಜನತೆ ಕಾಂಗ್ರೆಸ್ ಪಕ್ಷದ ಸುಳ್ಳು ಗ್ಯಾರಂಟಿಯನ್ನು ತಿರಸ್ಕರಿಸಿದ್ದಾರೆ. ಮುಂದಿನ ಲೋಕಸಭಾ ಚುನಾವಣೆಯಲ್ಲಿ 400 ಸೀಟುಗಳೊಂದಿಗೆ ಮೋದಿಯವರು ಮತ್ತೊಮ್ಮೆ ಪ್ರಧಾನಿ ಆಗಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
2014ರಲ್ಲಿ ಮೋದಿಜೀ ಅವರ ನೇತೃತ್ವದ ಸರಕಾರ ಅಧಿಕಾರಕ್ಕೆ ಬಂದ ಬಳಿಕ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಮೂಲಮಂತ್ರದಡಿ ಕಾರ್ಯ ನಿರ್ವಹಿಸಿದೆ. ಬಿಜೆಪಿ ತುಷ್ಟೀಕರಣ ನೀತಿಯನ್ನು ದೂರ ಮಾಡಿ ಪ್ರತಿಯೊಬ್ಬ ವ್ಯಕ್ತಿಯ ಅಭಿವೃದ್ಧಿ ಕಡೆ ಗಮನ ಕೊಟ್ಟಿದೆ ಎಂದು ವಿವರಿಸಿದರು.
ಜನವರಿ 22ರಂದು ಅಯೋಧ್ಯೆಯಲ್ಲಿ ಶ್ರೀರಾಮನ ವಿಗ್ರಹ ಪ್ರತಿಷ್ಠಾಪನೆ ಮೂಲಕ ಭಾರತದ ಜಾಗೃತಿ ಕಾರ್ಯ ನಡೆದಿದೆ. ಹೆಮ್ಮೆಯ ದೇಶವನ್ನಾಗಿ ಭಾರತವನ್ನು ಕೊಂಡೊಯ್ಯಲು ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಹೆಜ್ಜೆ ಮುಂದಿಟ್ಟಿದ್ದೇವೆ ಎಂದು ಅವರು ನುಡಿದರು.
ಬಡವರ ಕಲ್ಯಾಣ ಮತ್ತು ಆದರ್ಶ ರಾಮರಾಜ್ಯದ ನಿರ್ಮಾಣಕ್ಕಾಗಿ ನರೇಂದ್ರ ಮೋದಿಯವರು 2014ರಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಜನಧನ್ ಖಾತೆಗಳನ್ನು ತೆರೆಯಲು ಸೂಚಿಸಿದ ಪ್ರಧಾನಿಯವರು ಸೌಲಭ್ಯಗಳನ್ನು ನೇರವಾಗಿ ಜನರಿಗೆ ತಲುಪಿಸುವ ಕೆಲಸ ಮಾಡಿದರು.
ಜಿಎಸ್ಟಿ ಸಮರ್ಪಕ ಅನುಷ್ಠಾನಕ್ಕೆ ಕೇಂದ್ರದ ಬಿಜೆಪಿ ಸರಕಾರ ಮುಂದಾದರೆ, ಕಾಂಗ್ರೆಸ್ಸಿಗರು ಸಂಸತ್ ಅಧಿವೇಶನವನ್ನೇ ಬಹಿಷ್ಕರಿಸಿದರು ಎಂದು ಟೀಕಿಸಿದರು.
ದಲಿತ ಮಹಿಳೆಯನ್ನು ರಾಷ್ಟ್ರಪತಿ ಮಾಡಲು ನಾವು ಮುಂದಾದರೆ, ಕಾಂಗ್ರೆಸ್ಸಿಗರು ಅದರ ವಿರುದ್ಧ ಮತ ಚಲಾಯಿಸಿದರು. ಕಾಂಗ್ರೆಸ್ ಪಕ್ಷವು ದೇಶವನ್ನು ಜಾತಿಗಳಲ್ಲಿ ಹಂಚುವ ಕೆಲಸ ಮಾಡುತ್ತಿದೆ. ಒಬಿಸಿ ಸಮಾಜಕ್ಕೆ ಸಾಂವಿಧಾನಿಕ ಹಕ್ಕು ಕೊಡಲು ಮುಂದಾದರೆ ಅದನ್ನೂ ಕಾಂಗ್ರೆಸ್ ವಿರೋಧಿಸಿದೆ ಎಂದು ಆಕ್ಷೇಪಿಸಿದರು.
ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕಳೆದ 10 ವರ್ಷಗಳಲ್ಲಿ ದೇಶದ ರಾಜಕೀಯ ಕ್ಷೇತ್ರದಲ್ಲಿ ಪರಿವರ್ತನೆ, ಬಡವರಿಗೆ ನ್ಯಾಯ ಕೊಡುವ ವಿಷಯಕ್ಕೆ ಆದ್ಯತೆ ಕೊಡಲಾಗಿದೆ. ಸಾಮಾಜಿಕ, ಆರ್ಥಿಕ, ರಾಜಕೀಯ ನ್ಯಾಯ ಕೊಡುವ ಸಂದರ್ಭದಲ್ಲಿ ಅದನ್ನು ವಿರೋಧಿಸುವ ಕಾರ್ಯವನ್ನು ಕಾಂಗ್ರೆಸ್ ಮಾಡಿದೆ. ದೇಶದ ಇತರ ಕಡೆ ಕಾಂಗ್ರೆಸ್ ಪಕ್ಷ ನಿರ್ನಾಮವಾಗುತ್ತ ಸಾಗಿದೆ. ಕರ್ನಾಟಕದಲ್ಲೂ ಕಾಂಗ್ರೆಸ್ ಮುಕ್ತ ಮಾಡುವ ಸಂಕಲ್ಪವನ್ನು ನಾವು ಮಾಡಬೇಕೆಂದು ಆಶಿಸಿದರು.
ಕಾಂಗ್ರೆಸ್ ಪಕ್ಷವು ದೇಶವನ್ನು ಧರ್ಮದ ಆಧಾರದಲ್ಲಿ ಹಂಚಿತು. ಅಲ್ಪಸಂಖ್ಯಾತರು ಮತ್ತು ಬಹುಸಂಖ್ಯಾತ ಮತಬ್ಯಾಂಕ್ ಎಂದು ದೇಶವನ್ನು ಹಂಚಿದ ಕಾಂಗ್ರೆಸ್ ಪಕ್ಷವು ಅಭಿವೃದ್ಧಿಯನ್ನು ಸಂಪೂರ್ಣ ಕಡೆಗಣಿಸಿತ್ತು. ಅಲ್ಪಸಂಖ್ಯಾತರ ತುಷ್ಟೀಕರಣವನ್ನಷ್ಟೇ ಕಾಂಗ್ರೆಸ್ ಮಾಡಿದೆ ಎಂದು ದೂರಿದರು.
ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಮತ್ತು ರಾಜ್ಯದ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ರಾಜೀವ್ ಚಂದ್ರಶೇಖರ್, ಭಗವಂತ ಖೂಬಾ, ರಾಜ್ಯ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜೇಶ್ ಜಿ.ವಿ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್.ಅಶೋಕ್, ರಾಜ್ಯದ ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಜಗದೀಶ್ ಶೆಟ್ಟರ್, ರಾಜ್ಯದ ಮಾಜಿ ಉಪಮುಖ್ಯಮಂತ್ರಿಗಳಾದ ಡಾ.ಸಿ.ಎನ್.ಅಶ್ವತ್ಥನಾರಾಯಣ್, ಗೋವಿಂದ ಕಾರಜೋಳ, ಕೆ.ಎಸ್. ಈಶ್ವರಪ್ಪ, ನಿಕಟಪೂರ್ವ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ, ಬಿಜೆಪಿ ನಿಕಟಪೂರ್ವ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ಕುಮಾರ್ ಕಟೀಲ್, ವಿಧಾನಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಮತ್ತು ಆಹ್ವಾನಿತ ಪ್ರಮುಖರು ಉಪಸ್ಥಿತರಿದ್ದರು.