ನವದೆಹಲಿ,ಏ 24 (Daijiworld News/MSP): ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ, ಸಂಸದ ಉದಿತ್ ರಾಜ್ ಅವರು ರಾಹುಲ್ ಗಾಂಧಿಯವರ ಸಮ್ಮುಖದಲ್ಲಿ ಬುಧವಾರ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. ಉದಿತ್ ರಾಜ್ ನಾರ್ಥ್ ವೆಸ್ಟ್ ದೆಹಲಿ ಸಂಸದರಾಗಿದ್ದು, ಇನ್ನೂ ಈ ಕ್ಷೇತ್ರಕ್ಕೆ ಬಿಜೆಪಿ ಟಿಕೆಟ್ ಘೋಷಣೆಯಾಗಿಲ್ಲ. ಇನ್ನಷ್ಟೇ ಅಭ್ಯರ್ಥಿ ಘೋಷಣೆಯಾಗಬೇಕಿದೆ.
ಟಿಕೆಟ್ ಕೈ ತಪ್ಪುವ ಸೂಚನೆ ಸಿಗುತ್ತಿದ್ದಂತೆ, ಮಂಗಳವಾರ ಬೆಳಗ್ಗೆ ಟ್ವೀಟ್ ಮಾಡಿದ್ದ ಸಂಸದ ಉದಿತ್ ರಾಜ್ , ನಾನಿನ್ನು ಟಿಕೆಟ್ ಗಾಗಿ ಕಾಯುತ್ತಿದ್ದು, ಟಿಕೆಟ್ ನೀಡದಿದ್ದಲ್ಲಿ ಪಕ್ಷ ತೊರೆಯುತ್ತೇನೆ ’ ಎಂದು ಬೆದರಿಕೆ ಒಡ್ಡಿದ್ದರು. ಇದಾದ ಬೆನ್ನಲ್ಲೇ ’ಕಮಲ’ ತೊರೆದ ಉದಿತ್ ’ಕೈ ’ ಸೇರ್ಪಡೆಯಾಗಿದ್ದಾರೆ.
ಇನ್ನು ಬಿಜೆಪಿ ಟಿಕೆಟ್ ತಪ್ಪಿರುವ ಸಂಸದ ಉದಿತ್ ರಾಜ್ ರವರು ಟ್ವಿಟರ್ ಖಾತೆಯಲ್ಲಿನ ಹೆಸರಿನ ಮೊದಲು ಚೌಕಿದಾರ್ ಎಂದು ಬರೆದುಕೊಂಡಿದ್ದರು. ಆದರೆ ಉದಿತ್ ರಾಜ್ ರವರು ಆ ಬಳಿಕ ’ಚೌಕಿದಾರ್ ಉದಿತ್ ರಾಜ್ ’ ಬದಲು ಕೇವಲ ಉದಿತ್ ರಾಜ್ ಎಂದು ಮರು ನಾಮಕರಣ ಮಾಡಿಕೊಂಡಿದ್ದರು.