ಹೊಸದಿಲ್ಲಿ, ಜ 27 (DaijiworldNews/AA): ಕಲ್ಕತ್ತಾ ಹೈಕೋರ್ಟ್ನ ಇಬ್ಬರು ನ್ಯಾಯಾಧೀಶರ ನಡುವಿನ ಕಿತ್ತಾಟಕ್ಕೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದ್ದ ಸುಪ್ರೀಂ ಕೋರ್ಟ್ ಇಂದು ವಿಚಾರಣೆ ನಡೆಸಿದ್ದು ನಕಲಿ ಪ್ರಮಾಣ ಪತ್ರ ಹಗರಣಕ್ಕೆ ಸಂಬಂಧಿಸಿದ ವಿಚಾರಣೆಗೆ ತಡೆ ನೀಡಿದೆ.
ನ್ಯಾಯಾಧೀಶರಾದ ಅಭಿಜಿತ್ ಗಂಗೋಪಾಧ್ಯಾಯ ಹಾಗೂ ನ್ಯಾಯಾಧೀಶರಾದ ಸೌಮೆನ್ ಸೆನ್ ನಡುವಿನ ಕಲಹ ಬಗೆಹರಿಸಲು ಮುಂದಾಗಿರುವ ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ ಇಂದು ವಿಚಾರಣೆ ನಡೆಸಿದೆ. ನಕಲಿ ಜಾತಿ ಪ್ರಮಾಣಪತ್ರ ಹಗರಣದ ಆರೋಪದಲ್ಲಿ ಸಿಬಿಐ ತನಿಖೆಗೆ ಸಂಬಂಧಪಟ್ಟಂತೆ ಕಲ್ಕತ್ತಾ ಹೈಕೋರ್ಟ್ ನ ಏಕ ಸದಸ್ಯ ಪೀಠ ಹಾಗೂ ವಿಭಾಗೀಯ ಪೀಠದಲ್ಲಿನ ಎಲ್ಲಾ ಪ್ರಕ್ರಿಯೆಗಳಿಗೆ ಇದೀಗ ಸುಪ್ರೀಂಕೋರ್ಟ್ ತಡೆ ನೀಡಿದೆ.
ಹೈಕೋರ್ಟ್ ಏಕಸದಸ್ಯ ಪೀಠದ ನ್ಯಾ ಅಭಿಜಿತ್ ಗಂಗೋಪಾಧ್ಯಾಯ ಹಾಗೂ ವಿಭಾಗೀಯ ಪೀಠದ ನ್ಯಾ ಸೌಮೆನ್ ಸೆನ್ ನಡುವೆ ಎಂಬಿಬಿಎಸ್ ದಾಖಲಾತಿಯಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖಾ ಆದೇಶದ ವಿಚಾರಕ್ಕೆ ಸಂಬಂಧಿಸಿದಂತೆ ಕಲಹ ಪ್ರಾರಂಭವಾಗಿತ್ತು.
ಘಟನೆಯ ವಿವರ...
ನ್ಯಾ ಅಭಿಜಿತ್ ಗಂಗೋಪಾಧ್ಯಾಯ ಅವರು ಸರಕಾರಿ ಮೆಡಿಕಲ್ ಕಾಲೇಜುಗಳ ದಾಖಲಾತಿಯಲ್ಲಿ ನಡೆದಿರುವ ಅವ್ಯವಹಾರ ಬಗ್ಗೆ ಸಿಬಿಐ ತನಿಖೆ ನಡೆಸುವಂತೆ ಆದೇಶಿಸಿದ್ದರು. ಏಕಸದಸ್ಯ ಪೀಠದ ಆದೇಶಕ್ಕೆ ನ್ಯಾ ಸೌಮೆನ್ ಸೆನ್ ಅವರ ಪೀಠ ಮಧ್ಯಂತರ ತಡೆ ನೀಡಿದ್ದು, ಇದರಿಂದ ಕೋಪಗೊಂಡ ನ್ಯಾ ಅಭಿಜಿತ್ ಗಂಗೋಪಾಧ್ಯಾಯ ಅವರು ನ್ಯಾ ಸೆನ್ ಅವರು ರಾಜಕೀಯ ಪಕ್ಷದ ಪರವಾಗಿ ಆದೇಶ ನೀಡುತ್ತಿದ್ದಾರೆ. ಈ ಆದೇಶವನ್ನು ಸುಪ್ರೀಂ ಕೋರ್ಟ್ ಮರು ಪರಿಶೀಲಿಸುವಂತೆ ಹಾಗೂ ವೈಯಕ್ತಿಕ ಕಾರಣದಿಂದಾಗಿ ನ್ಯಾ ಸೆನ್ ಅವರು ಅಧಿಕಾರರೂಢ ಪಕ್ಷವನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆಂದು ಸಿಜೆಐಗೆ ಪತ್ರ ಬರೆದಿದ್ದರು.
ವಿಭಾಗೀಯ ಪೀಠದ ಆದೇಶದ ಹೊರತಾಗಿಯೂ ಅವ್ಯವಹಾರದ ಬಗ್ಗೆ ಸಿಬಿಐ ತನಿಖೆ ಮುಂದುವರಿಸಲು ನ್ಯಾ ಗಂಗೋಪಾಧ್ಯಾಯ ಆದೇಶಿಸಿದ್ದರು. ಈ ಆದೇಶದ ಪ್ರತಿಯನ್ನು ಸಿಜೆಐ ಮತ್ತು ಕಲ್ಕತ್ತಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗೆ ಕಳುಹಿಸುವಂತೆ ಹೈಕೋರ್ಟ್ನ ರಿಜಿಸ್ಟ್ರಾರ್ ಜನರಲ್ ಗೆ ಸೂಚನೆ ನೀಡಲಾಗಿತ್ತು. ಪಶ್ಚಿಮ ಬಂಗಾಳದಲ್ಲಿ ಅಧಿಕಾರದಲ್ಲಿರುವ ಕೆಲ ರಾಜಕೀಯ ಪಕ್ಷವನ್ನು ರಕ್ಷಿಸುವ ಉದ್ದೇಶದಿಂದ ನ್ಯಾ ಸೆನ್ ಅವರು ವೈಯಕ್ತಿಕ ಹಿತಾಸಕ್ತಿಯಂತೆ ನಡೆದುಕೊಳ್ಳುತ್ತಿದ್ದಾರೆ. ಪಶ್ಚಿಮ ಬಂಗಾಳದ ಆಡಳಿತಾರೂಢ ತೃಣ ಮೂಲ ಕಾಂಗ್ರೆಸ್ ಪಕ್ಷದ ಪರವಾಗಿ ನ್ಯಾಯಮೂರ್ತಿ ನಡೆದುಕೊಳ್ಳುತ್ತಿದ್ದಾರೆ ಎಂದು ಪರೋಕ್ಷವಾಗಿ ಅವರು ಆರೋಪಿಸಿದ್ದರು.
ಇದಾದ ಬಳಿಕ ಜ. 24 ಮತ್ತು 25ರಂದು ಹೈಕೋರ್ಟ್ ಏಕಸದಸ್ಯ ಪೀಠ ಹಾಗೂ ವಿಭಾಗೀಯ ಪೀಠಗಳೆರಡು ಒಂದರ ಹಿಂದೊಂದರಂತೆ ಆದೇಶ ಹೊರಡಿಸಿದ್ದವು. ಇದೀಗ ಈ ವಿವಾದದ ಬಗ್ಗೆ ವಿಚಾರಣೆ ನಡೆಸಿದ ಸಿಜೆಐ ಡಿವೈ ಚಂದ್ರಚೂಡ್ ಅವರ ನೇತೃತ್ವದ ಐವರು ನ್ಯಾಯಾಧೀಶರ ನ್ಯಾಯಪೀಠ ಜ. 29ಕ್ಕೆ ಮುಂದಿನ ವಿಚಾರಣೆ ನಿಗದಿಪಡಿಸಿದೆ.